

ಶಿವಮೊಗ್ಗ: ಡೀಸೆಲ್ ದರ ಇಳಿಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಲಾರಿ ಮತ್ತು ಸರಕು ಸಾಗಣೆ ವಾಹನಗಳ ಒಕ್ಕೂಟವು ಹಮ್ಮಿಕೊಂಡಿರುವ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಬೆಂಬಲ ಸೂಚಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಲಾರಿ ಮತ್ತು ಸರಕು ಸಾಗಣೆ ವಾಹನಗಳ ಮಾಲೀಕರ ಕಷ್ಟ ಚಿಂತಾಜನಕವಾಗಿದೆ. ಡೀಸಲ್ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿದಿದ್ದರೂ ದರ ಹೆಚ್ಚಿಸಲಾಗಿದೆ. ಟೋಲ್ ದರ ಕೂಡ ಅಧಿಕವಾಗಿದೆ. ಗುಣಮಟ್ಟದ ರಸ್ತೆಗಳಿಲ್ಲ. ವಾಹನ ಸಾಗಣೆಗಳಿಗೆ ಬೇಕಾದ ಎಲ್ಲ ವಸ್ತು(ಟೈಯರ್‌ಗಳು ಟಾರ್ಪಲಿನ್)ಗಳ ದರ ಅಧಿಕವಾಗಿವೆ. ಹಾಗಾಗಿ ಲಾರಿ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಿಂದ ಕೋಟಿಗಟ್ಟಲೇ ತೆರಿಗೆ ಕಟ್ಟುತ್ತಿದ್ದರೂ ಟ್ರಕ್ ಟರ್ಮಿನಲ್ ವ್ಯವಸ್ಥೆ ಇಲ್ಲ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಟ್ರಕ್ ಟರ್ಮಿನಲ್ ಇದ್ದರೂ ಶಿವಮೊಗ್ಗದಲ್ಲಿಲ್ಲ. ಅದಕ್ಕೊಸ್ಕರ ಹಣ ಮೀಸಲಿದ್ದರೂ ನಮಗೆ ಟರ್ಮಿನಲ್‌ಗಾಗಿ ಜಾಗ ಗುರುತಿಸಿ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ 9 ಸಾವಿರ ಸರಕು ಸಾಗಣೆ ವಾಹನಗಳಿದ್ದೂ, ಎಲ್ಲ ತರಹದ ತೆರಿಗೆಗಳನ್ನು ನಮ್ಮಿಂದ ಪಡೆದರೂ ನಮ್ಮ ಬೇಡಿಕೆಗಳನ್ನು ಈಡೆರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಖಂಡಿಸಿ ರಾಜ್ಯ ಲಾರಿ ಮಾಲಿಕರ ಸಂಘ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಘದ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದು, ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವಂತೆ ಒತ್ತಾಯಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎ.ತಲ್ಖಿನ್ ಅಹಮ್ಮದ್, ಕಾರ್ಯಾಧ್ಯಕ್ಷ ವೈ.ಎಚ್.ನಾಗರಾಜ್, ಕಾರ್ಯದರ್ಶಿ ಕೆ.ಎನ್.ಭೋಜರಾಜ್, ಸಂಘಟನಾ ಕಾರ್ಯದರ್ಶಿ ಸೈಯದ್ ಇಬ್ರಾಹಿಂ, ಖಜಾಂಚಿ ಎಂ.ಜಗನ್ನಾಥ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.