ಭಕ್ತಿಯ ಆಚರಣೆಯಿಂದ ಭಗವಂತನ ಅನುಗ್ರಹ

11srl1
ಶಿರಾಳಕೊಪ್ಪ ಬಸವೇಶ್ವರ ಸಮುದಾಯದಲ್ಲಿ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು.
Published on

ಶಿರಾಳಕೊಪ್ಪ: ಭಕ್ತಿ ಮತ್ತು ಶ್ರದ್ಧೆಯ ಆಚರಣೆಯಿಂದ ಭಗವಂತನ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂದು ಕ್ಯಾಸನೂರು ಹಿರೇಮಠ, ತೊಗರ್ಸಿ ಮಳೇ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಹಾಗಣಪತಿ ಪ್ರತಿಷ್ಠಾನ ಅಂಗವಾಗಿ ಶಿರಾಳಕೊಪ್ಪದ ಬಸವೇಶ್ವರ ಸಮುದಾಯ ಭವನದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಗುರುಗಳು ಕೊಡುವಂತಹ ಲಿಂಗವನ್ನು ಭಕ್ತಿಯಿಂದ ಧಾರಣೆ ಮಾಡಿಕೊಂಡು ಶಿವಪಂಚಾಕ್ಷರಿ ಮಹಾಮಂತ್ರದ ಸ್ಮರಣೆಯೊಂದಿಗೆ ಪೂಜೆ ಸಲ್ಲಿಸಬೇಕು ಎಂದು ತಿಳಿಸಿದರು.
ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆಲೋಚಿಸುವಂತೆಯೇ ಧಾರ್ಮಿಕ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಮಕ್ಕಳಿಗೆ ಕಲಿಸಲು ಮುಂದಾಗಬೇಕು. ಆಗ ಉತ್ತಮ ವ್ಯಕ್ತಿತ್ವ ಹೊಂದಿರುವ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಇತ್ತೀಚೆಗೆ ಲಿಂಗಧಾರಣೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಷ್ಟಲಿಂಗ, ಆತ್ಮಲಿಂಗದ ಪೂಜೆ ಬಿಟ್ಟು ಯಾವುದೇ ದೇವರ ಬಳಿ, ಗುರುಗಳ ಬಳಿ ಹೋದರೂ ಭಗವಂತನ ಆನುಗ್ರಹ ಸಿಗುವುದಿಲ್ಲ.ಶ್ರೀ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿಮಳೇ ಹಿರೇಮಠದ ಪೀಠಾಧಿಪತಿ

ಇಂದಿನ ಕಾಲಘಟ್ಟದಲ್ಲಿ ಯುವ ಪೀಳಿಗೆ ಅಸಭ್ಯವಾಗಿ ಕುಣಿದು, ಮೋಜು ಮಾಡುವುದರೊಂದಿಗೆ ಗಣಪತಿ ವಿಸರ್ಜನೆ ಮಾಡುವುದು ಸರಿಯಾದ ಕ್ರಮವಲ್ಲ. ಶ್ರದ್ಧಾಭಕ್ತಿಯಿಂದ ಪ್ರತಿಷ್ಠಾಪನೆ ಮಾಡುವಂತೆ ಜಾನಪದ ವಾದ್ಯಗಳೊಂದಿಗೆ ಭಕ್ತಿಯಿಂದ ಮೆರವಣಿಗೆ ಮೂಲಕ ವಿಸರ್ಜನೆ ಮಾಡಬೇಕು. ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಇಷ್ಟಲಿಂಗ ಪೂಜೆಯು ಬೆಳಗ್ಗೆ 8ರಿಂದ ಮೂರು ತಾಸು ನಡೆಯಿತು. ಭಕ್ತರು ಬಿಲ್ವಪತ್ರೆ, ಹೂವುಗಳನ್ನು ಸಮರ್ಪಿಸಿದರು. ಸ್ವಾಮೀಜಿ ಅವರಿಂದ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದರು. ಅಕ್ಕಮಹಾದೇವಿ ಪ್ರತಿಷ್ಠಾನದ ಮಹಿಳೆಯರು ಗಣೇಶನಿಗೆ ಪೂಜೆ ಸಲ್ಲಿಸಿ, ಗೌರಿಗೆ ಉಡಿ ತುಂಬಿದರು. ನಂತರ ಸಾವರ್ಜನಿಕ ಅನ್ನ ಸಂತರ್ಪಣೆ ನಡೆಯಿತು.
ಮಹಾಗಣಪತಿ ಸಮಿತಿ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ದಶರ್ನ್ ಬೆನ್ನೂರು, ಖಜಾಂಚಿ ನಾಗರಾಜ್ ಚಕ್ರಸಾಲಿ, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಅಕ್ಕಮಹಾದೇವಿ ಪ್ರತಿಷ್ಠಾನದ ರೂಪಾ ಹಾಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net