ಗುರುಸ್ಮರಣೆ ಮಾಡಿದರೆ ಭಗವಂತನೂ ಪ್ರಸನ್ನ

dharmika (6)
ಸಾಲೂರು ಹಿರೇಮಠದಲ್ಲಿ ಆಯೋಜಿಸಿದ್ದ ಗುರುನಮನ ಕಾರ್ಯಕ್ರಮವನ್ನು ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯರು, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಉದ್ಘಾಟಿಸಿದರು. ಶಿವಲಿಂಗಾರಾಧ್ಯ ಶಾಸ್ತ್ರಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯರು ಇತರರಿದ್ದರು.
Published on

ಶಿಕಾರಿಪುರ: ಗುರುವಿಗೆ ಶಿರಬಾಗದ ಎಂಥದ್ದೇ ಪಾಂಡಿತ್ಯ ಪಡೆದಿದ್ದರೂ ವ್ಯರ್ಥ. ಗುರುನಮನ ಮಾಡುವ ಸುದಿನ ನಮ್ಮದಾಗಿದೆ ಎಂದು ಸಾಲೂರು ಹಿರೇಮಠದ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯರು ಹೇಳಿದರು.

ಸಾಲೂರು ಹಿರೇಮಠದಲ್ಲಿ ಆಯೋಜಿಸಿದ್ದ ಶಿವಲಿಂಗಾರಾಧ್ಯ ಶಾಸ್ತ್ರಿಗಳ ಅಭಿನಂದನೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಪಾಠಶಾಲೆಯ ಗುರುಗಳಾದ ಶಿವಲಿಂಗಾರಾಧ್ಯರು ನನ್ನನ್ನೂ ಸೇರಿ 10ಕ್ಕೂ ಹೆಚ್ಚು ಪೀಠಾಧೀಶರ ಗುರುವಾಗಿದ್ದಾರೆ. ಗುರುಸ್ಮರಣೆ ಮಾಡಿದರೆ ಸ್ವತಃ ಭಗವಂತನೂ ಪ್ರಸನ್ನನಾಗುತ್ತಾನೆ. ಹರ ಮುನಿದರೂ ಗುರು ಕಾಯುವನು ಎನ್ನುವದು ದಿಟ. ಹರ ಮತ್ತು ಭಕ್ತರ ನಡುವೆ ಗುರು ಸೇತುವೆಯಾಗಿ ಕೆಲಸ ಮಾಡುತ್ತಾನೆ ಎಂದರು.

ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ, ಸಾಲೂರು ಹಿರೇಮಠವೆಂದರೆ ಸದಾ ವೇದಮಂತ್ರಗಳ ನಾದ ಪ್ರತಿಧ್ವನಿಸುವ ತಾಣ. ಈ ಮಠದ ಅಂಗಳದಲ್ಲಿ ವೇದ ಜ್ಯೋತಿಷ್ಯ ಅಭ್ಯಾಸ ಮಾಡಿದವರು ನಾಡಿನ ಖ್ಯಾತ ಜ್ಯೋತಿಷಿಗಳು ಚಿಂತಕರಷ್ಟೇ ಅಲ್ಲ ಮಠಾಧಿಪತಿಗಳೂ ಆಗಿದ್ದಾರೆ. ಶಿವಲಿಂಗಾರಾಧ್ಯ ಶಾಸ್ತ್ರಿಗಳು ಪಾಂಡಿತ್ಯದ ಶರಧಿ.ಅವರ ಜ್ಞಾನ ಅಪಾರವಾದುದು. ಅಕ್ಷರ ಕಲಿಸಿದಾತರಿಗೆ ಅನಂತ ಪ್ರಣಾಮಗಳನ್ನು ಸಲ್ಲಿಸುವ ಈ ಕಾರ್ಯಕ್ರಮ ಅನುಪಮವಾದುದು ಎಂದು ಬಣ್ಣಿಸಿದರು.

ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಭಗವಂತನ ಅನುಗ್ರಹ ಬೇಕಾದರೆ ನಮಗೆ ಮೊದಲು ಗುರುವಿನ ಅನುಗ್ರಹವಾಗಬೇಕು. ಗುರು ಮಾರ್ಗದರ್ಶನ ಮಾಡಿ ನಮ್ಮನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡುತ್ತಾನೆ. ಗುರು-ಶಿಷ್ಯರ ಸಂಬಂಧ ಎಂದರೆ ತಾಯಿ-ಮಗುವಿನ ಸಂಬಂಧ ಇದ್ದಂತೆ ಎಂದರು.

ದಿಂಡದಹಳ್ಳಿ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯರು, ಲಿಂಗದಹಳ್ಳಿ, ಬಿಳಕಿ, ಬುಕ್ಕಸಾಗರ, ಶಾಂತಾಪುರ, ಮಣಕೂರು ಶ್ರೀಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net