ಜಗತ್ತಿಗೆ ಬೆಳಕು ನೀಡಿದವರು ಭಗವಾನ್ ಬುದ್ಧ

bhuddha jayanti
ಕುವೆಂಪು ರಂಗಮಂದಿರದಲ್ಲಿ ಭಗವಾನ್ ಬುದ್ಧನ ಭಾವಚಿತ್ರಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಪುಷ್ಪನಮನ ಸಲ್ಲಿಸಿದರು. ಸಿ.ಎಸ್.ಚಂದ್ರಭೂಪಾಲ್, ಆರ್.ಕೆ.ಸಿದ್ದರಾಮಣ್ಣ, ಸಾವಕ್ಕನವರ್, ಗುರುದತ್ತ ಹೆಗಡೆ, ಎಚ್.ಉಮೇಶ್, ರಘು ಆರ್.ಮಲ್ಲಣ್ಣ ಇದ್ದರು.
Published on

ಶಿವಮೊಗ್ಗ: ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೆಳಕು ನೀಡಿದವರು ಭಗವಾನ್ ಬುದ್ಧ. ಶಾಂತಿ, ಸಹಬಾಳ್ವೆಯ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ಚೇತನ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುದ್ಧ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಈ ದೇಶಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಜ್ಞಾನದ ಶಕ್ತಿ ಕೊಟ್ಟಿದ್ದಾರೆ. ಅವರು ಅಧ್ಯಾತ್ಮ, ವೈಚಾರಿಕ ನೆಲೆಗಟ್ಟಿನ ಮಾರ್ಗ ತೋರಿಸಿದ್ದು, ಅದರಲ್ಲಿ ಬುದ್ಧ ಸದಾ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬುದ್ಧನ ಆಚಾರ-ವಿಚಾರ, ತತ್ವಗಳು ಈ ದೇಶಕ್ಕೆ ಪೂರಕವಾಗಿತ್ತು. ಹಾಗಾಗಿಯೇ ಅಂಬೇಡ್ಕರ್ ಗೌತಮ ಬುದ್ಧನನ್ನು ಅಪ್ಪಿಕೊಂಡರು ಎಂದರು.

ಬುದ್ಧ ಈ ದೇಶದಲ್ಲಿ ಶಾಂತಿ ಸಾರಿದ್ದಾರೆ. ಆ ದಿಸೆಯಲ್ಲೇ ಬೆಳಗ್ಗೆ ಎದ್ದಾಕ್ಷಣ ನಾವು ಬುದ್ಧನನ್ನು ನೆನೆಯುತ್ತೇವೆ. ನಾವೆಲ್ಲ ಆತನಂತೆ ದ್ವೇಷವನ್ನು ಬಿಟ್ಟು ಒಬ್ಬರಿಗೊಬ್ಬರು ಈ ದೇಶದಲ್ಲಿ ಶರಣಾಗಬೇಕು. ಬುದ್ಧಂ ಶರಣಂ ಗಚ್ಛಾಮಿ ಎಂಬ ಆಶಯವನ್ನು ಪ್ರತಿಯೊಬ್ಬ ವ್ಯಕ್ತಿಯೂ ಅಳವಡಿಸಿಕೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ್ ಈ ದೇಶದ ತ್ರಿವೇಣಿ ಸಂಗಮ. ಈ ಮೂವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ನಡೆಯಬೇಕು ಎಂದರು.

ಶಿಕಾರಪುರ ತಾಲೂಕು ಹೊಸೂರಿನ ಮೊರಾರ್ಜಿ ದೇಸಾಯಿ ವಿಜ್ಞಾನ ಪಿಯು ಕಾಲೇಜಿನ ಉಪನ್ಯಾಸಕ ರಘು ಆರ್. ಮಲ್ಲಣ್ಣರ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಮಾಜಿ ಎಂಎಲ್‌ಸಿ ಸಿದ್ದರಾಮಣ್ಣ, ಭದ್ರಾವತಿಯ ಸಂವಕ್ ಬುದ್ಧ ಧರ್ಮಾಂಕುರ ಟ್ರಸ್ಟ್ ಉಪಾಧ್ಯಕ್ಷ ಸಾವಕ್ಕನವರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net