

ಪ್ಯಾರಿಸ್: ಸಿನಿಮೀಯ ಶೈಲಿಯಲ್ಲಿ ಹಾಡಹಗಲಲ್ಲೇ ಚಿನ್ನಾಭರಣ ಸೇರಿದಂತೆ 100 ಕೋಟಿಗೂ ಅಧಿಕ ಮೌಲ್ಯದ ವಸ್ತುವನ್ನು ದರೋಡೆ ಮಾಡಿರುವ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲೇ ಈ ದರೋಡೆ ನಡೆದಿರುವುದು ಕಳವಳಕ್ಕೆ ಕಾರಣವಾಗಿದೆ.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಬೆಲೆ ಬಾಳುವ ಆಭರಣಗಳು ಮತ್ತು ಐಷಾರಾಮಿ ಕೈಗಡಿಯಾರಗಳನ್ನು ಮಾರಾಟ ಮಾಡುವ ಪಿಯಾಗೆಟ್ ಸ್ಟೋರ್ಗೆ ಶಸ್ತ್ರಸಜ್ಜಿತವಾಗಿ ನುಗ್ಗಿದ್ದ ದುಷ್ಕರ್ಮಿಗಳು ಸಿಬ್ಬಂದಿಯನ್ನು ಹೆದರಿಸಿ, ಅಂದಾಜು 180 ಕೋಟಿ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಮಧ್ಯಾಹ್ನ 1 ಗಂಟೆಯ ಸಮಯದಲ್ಲೇ ನಡೆದಿದೆ.
ಮೂವರು ದುಷ್ಕರ್ಮಿಗಳ ಗ್ಯಾಂಗ್ ಕೈಯಲ್ಲಿ ಬಂದೂಕು ಹಿಡಿದು ಈ ಕೃತ್ಯವನ್ನು ಎಸಗಿದ್ದಾರೆ. ಸ್ಟೋರ್ನ ಭದ್ರತಾ ಸಿಬ್ಬಂದಿ ಹಾಗೂ ಒಳಗಿದ್ದ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅಂಗಡಿಯಲ್ಲಿದ್ದ ಚಿನ್ನಾಭರಣ, ಹಣ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ಬ್ಯಾಗ್ಗಳಲ್ಲಿ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಅಂಗಡಿಯಲ್ಲಿದ್ದ ಗ್ರಾಹಕರಿಗಾಗಲಿ ಅಥವಾ ಸಿಬ್ಬಂದಿಗಾಗಲಿ ಯಾವುದೇ ಹಾನಿಯಾಗಿಲ್ಲ ಎಂದು ಪ್ಯಾರಿಸ್ ಪೊಲೀಸರು ಬಹಿರಂಗಪಡಿಸಿದ್ದಾರೆ.
ಪಿಯಾಗೆಟ್ ಎಂಬ ಈ ಕಂಪನಿ ಸ್ವಿಟ್ಜರ್ಲೆಂಡ್ ಮೂಲದ್ದು. ರಿಚೆಮಾಂಟ್ ಗ್ರೂಪ್‌ನ ಅಂಗಸಂಸ್ಥೆಯಾದ ಪಿಯಾಗೆಟ್ ಕಂಪನಿ ಐಷಾರಾಮಿ ಕೈಗಡಿಯಾರಗಳು ಮತ್ತು ದುಬಾರಿ ಆಭರಣಗಳನ್ನು ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಪ್ರತಿ ವಾಚ್‌ಗೆ ಕನಿಷ್ಠ ರೂ. 9ರಿಂದ 10 ಲಕ್ಷ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನ ಅತ್ಯಂತ ಜನನಿಬಿಡ ಸ್ಥಳವೆಂದೇ ಹೆಸರುವಾಸಿಯಾಗಿರುವ ರೂ ಡಿ ಲಾ ಪ್ರೀನಲ್ಲಿ ಪಿಯಾಗೆಟ್ ಅಂಗಡಿಯ ದರೋಡೆ ನಡೆದಿದೆ. ಈ ರೂ ಡೆ ಲಾ ಪ್ರಿಯು ಉನ್ನತ ಮಟ್ಟದ ಆಭರಣ ಮಳಿಗೆಗಳು ಮತ್ತು ಉನ್ನತ ಮಟ್ಟದ ಗಡಿಯಾರ ಅಂಗಡಿಗಳಿಂದ ತುಂಬಿದೆ.
ಇನ್ನು ಕಳೆದ ಏಪ್ರಿಲ್ನಲ್ಲಿಯೂ ಈ ಭಾಗದಲ್ಲಿ ಇಂತಹ ಭಾರೀ ಕಳ್ಳತನ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ನಲ್ಲಿ ಬಂದ ಮೂವರು ಬಲ್ಗೇರಿ ಅಂಗಡಿಗೆ ನುಗ್ಗಿ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ದೋಚಿದರು. (ಏಜೆನ್ಸೀಸ್)