

ಶಿವಮೊಗ್ಗ: ಭ್ರಷ್ಟಾಚಾರ ನಿಗ್ರಹ ಕಾನೂನುಗಳಲ್ಲಿಯೇ ಬಹಳಷ್ಟು ಲೋಪಗಳಿವೆ. ಹೀಗಾಗಿ ಕಾನೂನಿನ ಮೂಲಕ ತಡೆಯಲು ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವವರು ಕಾನೂನಿನಲ್ಲಿರುವ ಲೋಪಗಳನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಲೋಕಾಯುಕ್ತದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೇ.90ರಷ್ಟು ಅಧಿಕಾರಿಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿರುವುದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಹೀಗಾಗಿ ಸಂಪೂರ್ಣ ನಿರ್ಮೂಲನೆ ಅಸಾಧ್ಯ ಎಂದರು.
ಸರ್ಕಾರಿ ನೌಕರಿ ಎಂದರೆ ಜನಸೇವೆ ಮಾಡಲು ಸಿಕ್ಕ ಅವಕಾಶವೇ ಹೊರತು ಅಧಿಕಾರ ಸಾಧಿಸುವ ವೇದಿಕೆ ಅಲ್ಲ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಆಗ ಸರ್ಕಾರಿ ಇಲಾಖೆಗಳಲ್ಲಿ ಶೇ.50ರಷ್ಟಾದರೂ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ಸರ್ಕಾರಿ ನೌಕರರ ನಗದು ವ್ಯವಹಾರ ಪ್ರಶ್ನಾರ್ಹ. ಸರ್ಕಾರಿ ನೌಕರರು 20 ಸಾವಿರ ರೂ.ಗಿಂತ ಅಧಿಕವಾಗಿ ಖರ್ಚು ಮಾಡುವುದಾದರೆ ಬ್ಯಾಂಕ್ ಮೂಲಕವೇ ಮಾಡಬೇಕು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡಾ ಸರ್ಕಾರಿ ನೌಕರರ 20 ಸಾವಿರ ರೂ.ಗೂ ಅಧಿಕ ನಗದು ವ್ಯವಹಾರವನ್ನು ಆದಾಯ ತೆರಿಗೆ ಇಲಾಖೆಯ ತನಿಖೆಗೆ ಒಳಪಡಿಸಬೇಕೆಂದು ತಿಳಿಸಿದೆ ಎಂದರು.
ಹೊಸದಾಗಿ ಅಧಿಕಾರ ವಹಿಸಿಕೊಳ್ಳುವವರು ಹಿಂದಿನ ಅಧಿಕಾರಿಯ ಅವಧಿಯಲ್ಲಿ ಉಂಟಾಗಿರುವ ಲೋಪದ ಬಗ್ಗೆ ಲೋಕಾಯುಕ್ತರು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡದೆ ಹಿಂದಿನ ಅಧಿಕಾರದಲ್ಲಿದ್ದ ಅಧಿಕಾರಿಯ ಸಂಕ್ಷಿಪ್ತ ಮಾಹಿತಿಯನ್ನು ಲೋಕಾಯುಕ್ತರಿಗೆ ಒದಗಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಉನ್ನತ ಅಧಿಕಾರಿಗಳು ತಮ್ಮ ಸ್ಥಾನದಿಂದ ಭ್ರಷ್ಟಾಚಾರದ ನಿರ್ಮೂಲನೆ ಆರಂಭಿಸಬೇಕು. ಉನ್ನತ ಅಧಿಕಾರಿಗಳು ಭಷ್ಟಾಚಾರ ಪೋಷಿಸಿದರೆ ಅದು ಅಧೀನ ಸಿಬ್ಬಂದಿಗೂ ಸಹಾಯಕವಾಗುತ್ತದೆ. ಅದಕ್ಕೆ ಅವಕಾಶ ನೀಡಬಾರದು. ಉನ್ನತ ಹುದ್ದೆಯಲ್ಲಿ ಇರುವವರು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಹಣ ಹಾಗೂ ಅಧಿಕಾರದ ಪ್ರಭಾವದಿಂದ ಭ್ರಷ್ಟಾಚಾರ ಆರಂಭವಾಗುತ್ತದೆ. ಇದರಿಂದ ಬಡವರಿಗೆ ಹಾಗೂ ದುರ್ಬಲರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಅಧಿಕಾರಿಗಳು ಯಾರ ಪ್ರಭಾವಕ್ಕೆ ಒಳಗಾಗದೆ ಕಾನೂನು ಹಾಗೂ ಕಾಯ್ದೆಯಡಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುವುದು ಕೂಡಾ ಒಂದು ರೀತಿಯ ಭ್ರಷ್ಟಾಚಾರ ಎಂದು ಅಭಿಪ್ರಾಯಪಟ್ಟರು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಎನ್.ಹೇಮಂತ್, ಸಿಸಿಎಫ್ ಡಾ. ಕೆ.ಟಿ.ಹನುಮಂತಪ್ಪ, ಲೋಕಾಯುಕ್ತ ಡಿವೈಎಸ್ಪಿ ಎಂ.ಎಚ್.ಮಂಜುನಾಥ ಚೌದರಿ, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್, ಇನ್‌ಸ್ಪೆಕ್ಟ್‌ರ್ ಕೆ.ಪಿ.ರುದ್ರೇಶ್ ಮುಂತಾದವರಿದ್ದರು.