

ನವದೆಹಲಿ: ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ರಾಜಧಾನಿಗೆ ಭೇಟಿ ನೀಡುವ ಮುನ್ನಾ ದಿನ ಇಂದು (ಆ.09) ಎಕ್ಸ್ ಖಾತೆಯಲ್ಲಿ ಕನ್ನಡದಲ್ಲೇ ಪೋಸ್ಟ್ ಮಾಡಿದ್ದಾರೆ.
ನಾಳೆ, ಆಗಸ್ಟ್ 10 ರಂದು ಬೆಂಗಳೂರಿನ ಜನರೊಂದಿಗೆ ಇರಲು ಎದುರು ನಾನು ನೋಡುತ್ತಿದ್ದೇನೆ. ಸಂಪರ್ಕವನ್ನು ಸುಧಾರಿಸುವ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಕೆಎಸ್ಆರ್ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಾಗುವುದು. ಬೆಂಗಳೂರು ನಗರದ ಮೂಲಸೌಕರ್ಯವನ್ನು ಹೆಚ್ಚಿಸಲು, ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲಾಗುವುದು. ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಗುವುದು ಎಂದು ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
ನಗರದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲ ಆಗಲಿರುವ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ ಭಾನುವಾರ (ಆ.10) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. 17 ಸಾವಿರ ಕೋಟಿ ರೂ. ವೆಚ್ಚದ ಮೆಟ್ರೋ ಹಂತ-3 ಜೆ.ಪಿ. ನಗರ ವೆಗಾಸಿಟಿ ಮಾಲ್ನಿಂದ ಕಡಬಗೆರೆವರೆಗಿನ ಮಾರ್ಗಕ್ಕೆ ಪ್ರಧಾನಿ ಶಂಕುಸ್ಥಾಪನೆ ಮಾಡಲಿದ್ದಾರೆ. ಅಂದು ಬೆಳಗ್ಗೆ ಪ್ರಧಾನಿ ಮೋದಿ ನಗರಕ್ಕೆ ಆಗಮಿಸಲಿದ್ದು, ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತದ ಬಳಿಯ ಸೇನಾ ಮೈದಾನಕ್ಕೆ ಬರಲಿದ್ದಾರೆ. ಅಲ್ಲಿಂದ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ ಮೂಲಕ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತಲುಪಿ, ಅಲ್ಲಿ ಬೆಂಗಳೂರು-ಬೆಳಗಾವಿ ನಡುವಿನ ವಂದೇಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್ ಎಂಡ್ ಸರ್ಕಲ್, ರಾಗಿಗುಡ್ಡ, ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ಸ್ಟೇಷನ್‌ಗಳ ಬಳಿ ಮತ್ತು ಹಳದಿ ಮಾರ್ಗದ ಎಲ್ಲ ನಿಲ್ದಾಣಗಳಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ. ಪ್ರಧಾನಿಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಸೌತ್ ಎಂಡ್ ವೃತ್ತದ ಮೂಲಕ ರಾಗಿಗುಡ್ಡ ತಲುಪುವರು. ಅಲ್ಲಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ನಿಲ್ದಾಣಕ್ಕೆ ಹೋಗಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿದೆ.
(ಏಜೆನ್ಸೀಸ್)