

ಬೆಂಗಳೂರು: ರಂಜಾನ್ ಹಬ್ಬದ ಶಬ್-ಇ-ಬಾರಾತ್ ಸಂಭ್ರಮದಲ್ಲಿ ತಡರಾತ್ರಿ ಲಾಂಗ್ ಹಿಡಿದು ವ್ಹೀಲಿಂಗ್ ನಡೆಸುತ್ತಾ ಆತಂಕ ಸೃಷ್ಟಿಸಿದ್ದ 11 ಪುಂಡರನ್ನು ದೇವರಜೀವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಪಾಯಕಾರಿ ವ್ಹೀಲಿಂಗ್ ಮಾಡಿದ್ದ ನಯೀಂ ಪಾಶಾ, ಅರಾಫತ್, ಸಾಹಿಲ್ ಹುಸೈನ್, ನಜ್ಮತ್, ಅದ್ನಾನ್ ಪಾಶಾ, ನಿಯಾಮತುಲ್ಲಾ ಸೇರಿ 11 ಮಂದಿ ಬಂಧಿತರು. 18 ರಿಂದ 20 ವರ್ಷ ಒಳಗಿನವರು ಆಗಿದ್ದು, ಮೊದಲ ಬಾರಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಈ ಆರೋಪಿಗಳ ವಿರುದ್ಧ ರೌಡಿಪಟ್ಟಿ ತೆಗೆದಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಫೆಬ್ರವರಿ 13ರಂದು ಶಬ್-ಇ-ಬಾರಾತ್ ಹಬ್ಬ ಆಚರಣೆಗೆ ಕೆ.ಜಿ ಹಳ್ಳಿಯ ನೂರ್ ಮಸೀದಿ ಬಳಿ ಸೇರಿದ್ದ ಬಂಧಿತ ಪುಂಡರು, ರೀಲ್ಸ್ ಕ್ರೇಜ್‌ಗಾಗಿ ಮಾರಕಾಸ್ತ್ರ ಹಿಡಿದು, ತ್ರಿಬಲ್ ರೈಡ್, ವ್ಹೀಲಿಂಗ್ ಮಾಡುತ್ತಾ ಕೆ.ಜಿ ಹಳ್ಳಿಯಿಂದ ಡಿ.ಜೆ ಹಳ್ಳಿ, ರಾಮಮೂರ್ತಿನಗರ ಮಾರ್ಗವಾಗಿ ಹೊಸಕೋಟೆ ಟೋಲ್‌ವರೆಗೂ ಹೋಗಿ ಅಲ್ಲಿಂದ ಕೆ.ಜಿ ಹಳ್ಳಿಗೆ ವಾಪಸಾಗಿದ್ದರು.
ಪುಂಡರ ಭಯಾನಕ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಗರದ ಜನತೆಯ ಆತಂಕ ಕಾರಣವಾಗಿತ್ತು. ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ಡಿ. ದೇವರಾಜ್ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದು 11 ಆರೋಪಿಗಳನ್ನು ಬಂಧಿಸಿದೆ ಎಂದು ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಫೆ.13ರಂದು ನಗರದ ಎಲ್ಲೆಡೆ ನಾಕಾಬಂದಿ ವಿಧಿಸಲಾಗಿತ್ತು. ಆದರೂ ಈ ಗ್ಯಾಂಗ್ ತಡೆಯುವ ಕೆಲಸವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ವಹಿಸಲಾಗಿದೆ.
ಬಿ. ದಯಾನಂದ್-ನಗರ ಪೊಲೀಸ್ ಆಯುಕ್ತ