

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ನರೇಗಾ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಮೊಬೈಲ್ ಮೇಲ್ವಿಚಾರಣಾ ವ್ಯವಸ್ಥೆ(ಎನ್‌ಎಂಎಂಎಸ್) ತಂತ್ರಾಂಶ ಅಳವಡಿಸಿದೆ. ಈ ಮೂಲಕ ಲೈವ್ ಫೋಟೋ ಸಂಗ್ರಹಿಸುತ್ತಿದ್ದು, ಶೀಘ್ರದಲ್ಲಿಯೇ ಮೇಲ್ವಿಚಾರಕರು ಕೂತಲ್ಲಿಯೇ ಕಾಮಗಾರಿಯನ್ನು ನೇರ ವೀಕ್ಷಣೆ ಮಾಡುವ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ.
ನರೇಗಾ ಯೋಜನೆಯಡಿ ಕೈಗೊಳ್ಳುವ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಜನರ ದೈನಂದಿನ ಹಾಜರಾತಿ ಮತ್ತು ಕಾಮಗಾರಿ ಸ್ಥಳದ ಫೋಟೋ ಸೆರೆ ಹಿಡಿಯಲು ಎನ್‌ಎಂಎಂಎಸ್ ಮೊಬೈಲ್ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕಾಗಿದೆ.
ಈ ಮೊದಲು ಕಾಮಗಾರಿ ಮತ್ತು ಕಾರ್ಮಿಕರ ಫೋಟೋವನ್ನು ಅಪ್‌ಲೋಡ್ ಮಾಡುವಾಗ ಸಾಕಷ್ಟು ಲೋಪ ಎಸಗಿ ಅಕ್ರಮದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಅಪ್ರಸ್ತುತ ಫೋಟೋ, ಕೆಲಸಗಾರರ ಎಣಿಕೆಯಲ್ಲಿ ವ್ಯತ್ಯಾಸ, ಫೋಟೋ ಮೇಲೆ ಫೋಟೋ ಸೆರೆ ಹಿಡಿದು ಅಪ್‌ಲೋಡ್ ಸೇರಿದಂತೆ ಅನೇಕ ಲೋಪ ಎಸಗಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಎನ್‌ಎಂಎಂಎಸ್ ಮೊಬೈಲ್ ತಂತ್ರಾಂಶವನ್ನು ಪರಿಚಯಿಸಿದೆ. ಆಯಾ ದಿನದ ಕಾಮಗಾರಿ ಸ್ಥಳ ಮತ್ತು ಫೋಟೋವನ್ನು ಲೈವ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗಿದೆ.
ಇವುಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಿ ಮಾಡುವ ಅಧಿಕಾರಿ, ಆಯಾ ದಿನದ ಶೇ.100 ಹಾಜರಾತಿ ಮತ್ತು ೆಟೋಗಳನ್ನು ಅದೇ ಪರಿಶೀಲನೆ ನಡೆಸಬೇಕು. ಇದಾದ ಮೇಲೆ ತಾಲೂಕು ಮಟ್ಟದ ಕಾರ್ಯ ನಿರ್ವಾಹಕಾಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಶೇ.20 ಫೋಟೋವನ್ನು ಒಂದು ಅಥವಾ ಎರಡು ದಿನಗಳಲ್ಲಿ ರ‌್ಯಾಂಡಮ್ ಆಗಿ ಪರಿಶೀಲನೆ ನಡೆಸಬೇಕು. ಬಳಿಕ ಜಿಲ್ಲಾ ಮಟ್ಟದ ನರೇಗಾ ನೋಡಲ್ ಅಧಿಕಾರಿಗಳು ಶೇ.10 ಮತ್ತು ರಾಜ್ಯ ಮಟ್ಟದ ಆಯುಕ್ತರು ಶೇ.5 ಫೋಟೋಗಳನ್ನು ರ‌್ಯಾಂಡಮ್ ಆಗಿ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ.
ಶೀಘ್ರದಲ್ಲಿಯೇ ಎನ್‌ಎಂಎಂಎಸ್ ಹಾಜರಾತಿ ಮತ್ತು ೆಟೋ ಪರಿಶೀಲನಾ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲಿಯವರೆಗೂ ಅಧಿಕಾರಿಗಳೇ ಪರೀಕ್ಷೆ ನಡೆಸಿ ಪ್ರತಿದಿನ ವರದಿಯನ್ನು ಆಯುಕ್ತರ ಕಚೇರಿಗೆ ಕಳುಹಿಸಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೂಚನೆ ನೀಡಿದೆ.
ಎನ್‌ಎಂಎಂಎಸ್ ಮೇಲ್ವಿಚಾರಣೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪರಿಶೀಲನಾ ಘಟಕ ಸ್ಥಾಪನೆ ಮಾಡಲಾಗುತ್ತದೆ. ತಪ್ಪುಗಳು ಎಸಗಿದರೇ ಅಥವಾ ತಂತ್ರಾಂಶ ದುರ್ಬಳಕ್ಕೆ ಮಾಡಿಕೊಂಡು ದೋಷಪೂರಿತ ೆಟೋಗಳು ಕಂಡು ಬಂದರೇ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆಯಿಂದ ಎಚ್ಚರಿಕೆ ನೀಡಿದೆ.
ಜಿಲ್ಲಾ ಮಟ್ಟದಲ್ಲಿ ಎನ್‌ಎಂಎಂಎಸ್ ಛಾಯಚಿತ್ರಗಳು 15 ದಿನಗಳು ಮಾತ್ರ ಸಂಗ್ರಹವಾಗಿರುತ್ತದೆ. ಆದರಿಂದ ಪ್ರತಿ ಕಾಮಗಾರಿಯ ಪ್ರತಿ ದಿನದ ಫೋಟೋವನ್ನು ಬ್ಯಾಕ್‌ಅಪ್ ಪಡೆಯಲು ಮೀಸಲಿಟ್ಟ ಅನುದಾನದಲ್ಲಿ ಹಾರ್ಡ್‌ಡಿಸ್ಕ್ ಖರೀದಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಮಧ್ಯಾಹ್ನದ ಹಾಜರಾತಿ ಕಡ್ಡಾಯ :
ಬೆಳಗ್ಗೆ ಕೂಲಿಗೆ ಬಂದವರು ಮಧ್ಯಾಹ್ನಕ್ಕೆ ಇರುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ಹಾಜರಾತಿ ಮತ್ತು ಛಾಯಚಿತ್ರಗಳನ್ನು ಕಡ್ಡಾಯ ಮಾಡಿದೆ. ಹಾಜರಾತಿ ಪಡೆಯದೆ ವೇತನ ಪಟ್ಟಿ ಸೃಜನೆ ಮಾಡದ ರೀತಿಯಲ್ಲಿ ತಂತ್ರಾಂಶದಲ್ಲಿ ಅಪ್‌ಗ್ರೇಡ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಸ್ಥಳದಿಂದ ಲೈವ್ ಮಾಡುವ ಬಗ್ಗೆಯೂ ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ.
ಕೇಂದ್ರ ಸರ್ಕಾರ ಗುರುತಿಸಿದ್ದ ಲೋಪದೋಷಗಳು
-ಅಪ್ರಸ್ತುತ ಮತ್ತು ಸಂಬಂಧವಿಲ್ಲದ ಫೋಟೋ ಅಪ್‌ಲೋಡ್
-ಲೈವ್ ಫೋಟೋ ಬದಲು ಫೋಟೋ ಮೇಲೆ ಫೋಟೋ ಸೆರೆ
-ಕೆಲಸಗಾರರ ಎಣಿಕೆಯಲ್ಲಿ ವ್ಯತ್ಯಾಸ
-ಮಹಿಳೆ ಮತ್ತು ಪುರುಷ ಕೆಲಸಗಾರರ ಎಣಿಕೆಯಲ್ಲಿ ವ್ಯತ್ಯಾಸ
-ಕೆಲಸಗಾರರು ಒಂದಕ್ಕಿಂತ ಹೆಚ್ಚಿನ ಮಸ್ಟರ್ ರೋಲ್‌ನಲ್ಲಿ ಇರುವುದು
-ಬೆಳಗ್ಗೆ ಮತ್ತು ಮಧ್ಯಾಹ್ನದ ಫೋಟೋಗಳಲ್ಲಿ ಬೇರೆಬೇರೆ ಕಾರ್ಮಿಕರು
-ಮಧ್ಯಾಹ್ನದ ಫೋಟೋ ಅಪ್‌ಲೋಡ್ ಮಾಡದೆ ಇರುವುದು
-ಪುರುಷರಿಗೆ ಸೀರೆ ತೊಡಿಸಿ ಫೋಟೋ ಅಪ್‌ಲೋಡ್
-ಒಂದೇ ಕಾಮಗಾರಿ ಸ್ಥಳವನ್ನು ಪದೇ ಪದೆ ಬಳಕೆ