ವಿಜಯ್​ ಮಲ್ಯಗೆ ಸದ್ಯಕ್ಕೆ ಸಿಕ್ತು ರಿಲೀಫ್​!: ಲಂಡನ್​ ಕೋರ್ಟ್​ನಲ್ಲಿ ಏನಾಯಿತು ವಿಚಾರಣೆ?

Vijay Mallya vvani
Published on

ಲಂಡನ್: ಭಾರತದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಕನ್ಸೋರ್ಟಿಯಂ ಬ್ಯಾಂಕ್​ಗಳಿಗೆ 9,000 ಕೋಟಿ ರೂಪಾಯಿಗೂ ಅಧಿಕ ಸಾಲ ಮರುಪಾವತಿಸದೇ ವಂಚಿಸಿದ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಅವರ ದಿವಾಳಿತನದ ಅರ್ಜಿ ವಿಚಾರಣೆ ಕುತೂಹಲದ ಘಟ್ಟದಲ್ಲಿದೆ. ಮಲ್ಯ ಅವರ ಮುಚ್ಚಿರುವ ಕಿಂಗ್​ಫಿಷರ್ ಏರ್​ಲೈನ್ಸ್​ನ ಸಾಲದ ವಿಚಾರವಾಗಿ ಕಳೆದ ವರ್ಷದ ಡಿಸೆಂಬರ್​ನಲ್ಲಿ ಜಡ್ಜ್​ ಮೈಕೆಲ್​ ಬ್ರಿಗ್ಸ್​ ವಾದ-ಪ್ರತಿವಾದವನ್ನು ಆಲಿಸಿದ್ದರು. ಬಳಿಕ ತೀರ್ಪನ್ನು ಕಾಯ್ದಿರಿಸಿದ್ದರು.

ಈ ನಡುವೆ ಮಲ್ಯ ಅವರು ಸಲ್ಲಿಸಿದ್ದ ದಿವಾಳಿತನದ ಅರ್ಜಿಯೂ ವಿಚಾರಣೆಯ ಹಂತದಲ್ಲಿದೆ. ಇದನ್ನು ಕೈಗೆತ್ತಿಕೊಂಡ ಜಸ್ಟೀಶ್ ಬ್ರಿಗ್ಸ್​, ಇದರ ವಿಚಾರಣೆಯನ್ನು ಮುಂದೂಡಿದ್ದಾರೆ. ಅಲ್ಲದೆ, ಭಾರತದ ಸುಪ್ರೀಂ ಕೋರ್ಟ್​ನಲ್ಲಿ ಇರುವ ಅವರ ಪಿಟಿಷನ್​ಗಳು ಮತ್ತು ಕರ್ನಾಟಕ ಹೈಕೋರ್ಟ್​​ನಲ್ಲಿ ಇರುವಂತಹ ಸಾಲ ಮರುಪಾವತಿಯ ಪ್ರಸ್ತಾವನೆಗಳು ಇತ್ಯರ್ಥವಾಗುವ ತನಕ ಕಾಲಾವಕಾಶ ನೀಡಬೇಕಾಗುತ್ತದೆ. ಅವರಿಗೆ ಸಾಲ ಮರುಪಾವತಿಗೂ ಅವಕಾಶ ನೀಡಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಬ್ಯಾಂಕುಗಳು ದಿವಾಳಿತದ ಅರ್ಜಿ ವಿಚಾರಣೆಗೆ ಒತ್ತಡ ಹೇರುತ್ತಿದ್ದು, ಭಾರತದಲ್ಲಿ ಇದಕ್ಕೆ ಸಂಬಂಧಿಸಿ ಬೇರೆಬೇರೆ ವಿಚಾರಣೆಗಳು ಚಾಲ್ತಿಯಲ್ಲಿವೆ ಎಂಬುದೂ ಚೀಫ್​ ಇನ್​ಸಾಲ್ವೆನ್ಸಿ ಆ್ಯಂಡ್ ಕಂಪನಿ ಕೋರ್ಟ್​ನ ಜಡ್ಜ್ ಕೂಡ ಆಗಿರುವ ಬ್ರಿಗ್ಸ್ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಲಂಡನ್ ಕೋರ್ಟ್​ನ ಈ ನಡೆಯಿಂದಾಗಿ ಮಲ್ಯ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net