ಮತಭಾರತ: ಉತ್ತರದಾಯಿತ್ವದ ಸತ್ವ ಪರೀಕ್ಷೆ

ವಿಜಯವಾಣಿ (5)
Published on

ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ರಾಜಕೀಯ ನಿವೃತ್ತಿ ಕ್ಷೇತ್ರದ ಚಿತ್ರಣ ಬದಲಿಸಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಬಿಜೆಪಿ, ಮೂವರು ಕಾಂಗ್ರೆಸ್ ಶಾಸಕರಿದ್ದಾರಾದರೂ ಎಸ್.ಟಿ.ಸೋಮಶೇಖರ್ ಮತ್ತೆ ಕಾಂಗ್ರೆಸ್​ನತ್ತ ವಾಲಿದ್ದಾರೆ. ಶಾಸಕರ ಸಂಖ್ಯಾಬಲದ ಪ್ರಕಾರ ಆಡಳಿತ, ಪ್ರತಿಪಕ್ಷ ಸಮಬಲ ಸಾಧಿಸಿವೆ. ಜೆಡಿಎಸ್ ಬೆಂಬಲ ಕಮಲಕ್ಕೆ ರಕ್ಷೆಯಾಗಿದೆ.

ಭೌಗೋಳಿಕವಾಗಿ ಉದ್ದನೆ ರೈಲುಗಾಡಿಯಂತಿದ್ದ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರವು 2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಅರ್ಧಚಂದ್ರಾಕೃತಿಯಾಗಿದೆ. ಕ್ಷೇತ್ರದ ರಾಜಕೀಯ, ಅಭಿವೃದ್ಧಿ ನಕ್ಷೆಯು ಈಗಿನ ಸ್ವರೂಪ ಹೋಲುವಂತಿದ್ದರೆ ಕಾಕತಾಳೀಯವೇನಲ್ಲ. ಘಟಾನುಘಟಿಗಳು ಪ್ರತಿನಿಧಿಸಿದ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಎಲ್ಲ ಇದ್ದು ಏನೂ ಇಲ್ಲವೆಂಬ ಪರಿಸ್ಥಿತಿಯಿದೆ. ಕಳೆದ ಒಂದು ದಶಕದಿಂದ ಅಲ್ಪಮಟ್ಟಿಗೆ ಸುಧಾರಣೆ ಗಾಳಿ ಬೀಸುತ್ತಿದೆ ಎನ್ನುವುದು ಕ್ಷೇತ್ರದ ಜನರ ಅನಿಸಿಕೆ. ಮೊದಲ ಬಾರಿಗೆ ಕಮಲ ಅರಳಿದಾಗಿನಿಂದ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ. ಸತತ ನಾಲ್ಕು ಬಾರಿ ಗೆದ್ದಿರುವ ಪಕ್ಷಕ್ಕೆ 2024ರಲ್ಲೂ ಜಯಭೇರಿ ಬಾರಿಸಿ ಬೆಳ್ಳಿಹಬ್ಬ ಆಚರಿಸಿಕೊಳ್ಳುವ ಉಮೇದಿಯಿದೆ. ಆದರೆ ಹಾಲಿ ಸಂಸದ ಡಿ.ವಿ.ಸದಾನಂದಗೌಡ ದಿಢೀರ್ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ, ಪಕ್ಷದ ಕೆಲವು ಮುಖಂಡರ ಆಂತರಿಕ ಒತ್ತಡದಿಂದ ಮತ್ತೆ ಅರೆಮನಸ್ಕ ಸ್ಥಿತಿ. ಕೇಂದ್ರ ನಾಯಕರಿಂದ ಸಿಗದ ಸಕಾರಾತ್ಮಕ ಸ್ಪಂದನೆಯಿಂದ ಡಿವಿಎಸ್ ಡೋಲಾಯಮಾನವಾಗಿದ್ದಾರೆ.

ಕ್ಷೇತ್ರದ ಸಂಭಾವ್ಯರ ಸಾಲಿನಲ್ಲಿ ಹಾಲಿ ಸಂಸದರಾದ ಸುಮಲತಾ ಅಂಬರೀಷ್, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ.ರವಿ ಹೆಸರುಗಳು ಸುಳಿದಾಡಿದವು. ಈ ಪಟ್ಟಿಗೆ ಬಿ.ನಾರಾಯಣಗೌಡ ಹೊಸದಾಗಿ ಸೇರಿದ್ದರೆ, ಇನ್ನೂ ಕೆಲವರು ಒಳಗೊಳಗೆ ಸುತ್ತಾಡಿದರು. ಪಕ್ಷದ ವರಿಷ್ಠರು ಪಕ್ಷದ ಕಾರ್ಯಕರ್ತರ ಅಭಿಪ್ರಾಯ, ಆಂತರಿಕ ಸಮೀಕ್ಷೆ ಆಧರಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದು ಅರಿತು, ಸದ್ದಿಲ್ಲದೆ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್​ನಲ್ಲಿ ಸಂಸದ ಡಿ.ಕೆ.ಸುರೇಶ್, ಆರ್​ಆರ್​ನಗರದಲ್ಲಿ ಸೋತ ಕುಸುಮಾ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ, ಜಯನಗರದಲ್ಲಿ ಸೋತ ಸೌಮ್ಯರೆಡ್ಡಿ ಹೆಸರುಗಳು ಕೇಳಿಬರುತ್ತಿವೆ. ‘ಇರುಳು ಕಂಡ ಬಾವಿಯಲ್ಲಿ ಹಗಲು ಬೀಳಲು ಇಷ್ಟವಿಲ್ಲ’ ಎಂಬ ಧೋರಣೆಯೇ ಕಾಂಗ್ರೆಸ್​ನ ಕೆಲವು ಮುಖಂಡರಲ್ಲಿದ್ದು, ಆದರೆ ಆಕಾಂಕ್ಷಿಗಳ ಪೈಪೋಟಿ ಮೇಲ್ನೋಟಕ್ಕೆ ಕಾಣುತ್ತಿಲ್ಲ.

ಮತ ಲೆಕ್ಕಾಚಾರ

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡ 8,24,500 ಮತಗಳನ್ನು ಪಡೆದು ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಕೃಷ್ಣಬೈರೇಗೌಡ ಅವರನ್ನು 1,47,518 ಮತಗಳ ಅಂತರದಿಂದ ಸೋಲಿಸಿದ್ದರು. ಕೃಷ್ಣಬೈರೇಗೌಡ 6,76,982 ಮತಗಳನ್ನು ಪಡೆದಿದ್ದರು.

ಸಮರ್ಥರ ಚಿಂತೆ

ಮೋದಿ ವರ್ಚಸ್ಸು, ಅಭಿವೃದ್ಧಿ-ಹಿಂದುತ್ವದ ಅಜೆಂಡಾದ ಮೇಲೆ ಸಾಗಿರುವ ಬಿಜೆಪಿಗೆ ಈ ಬಾರಿ ಸೋಲುಣ್ಣಿಸಬೇಕೆಂಬ ತವಕ ಕಾಂಗ್ರೆಸ್​ನ ಅಗ್ರ ನಾಯಕರಲ್ಲಿದೆ. ರಾಜ್ಯದಲ್ಲಿ ಅಧಿಕಾರದ ಸೂತ್ರ ಹಿಡಿದಿರುವುದು, ಗ್ಯಾರಂಟಿ ಯೋಜನೆಗಳು ನೆರವಾಗುವ ನಿರೀಕ್ಷೆಯಿಟ್ಟುಕೊಂಡಿದೆ. ಆದರೆ ಸಮರ್ಥ ಅಭ್ಯರ್ಥಿಯದೇ ನಾಯಕರಿಗೆ ಚಿಂತೆಯಾಗಿದೆ. ಕಳೆದ ಬಾರಿ ವರಿಷ್ಠರ ಒತ್ತಾಸೆ, ಮನವೊಲಿಕೆ ಮೇರೆಗೆ ಕೃಷ್ಣಬೈರೇಗೌಡ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಕಂದಾಯ ಸಚಿವರಾಗಿದ್ದು, ಮತ್ತೆ ಅವರನ್ನೇ ಕಣಕ್ಕೆ ಇಳಿಸುವ ಯೋಚನೆ ಕೆಲವರಲ್ಲಿ ಸುಳಿದಾಡಿದೆ.

ಪವರ್ ‘ಫುಲ್ ಡಲ್’

ಸಂಚಾರದಟ್ಟಣೆ ಪ್ರಯೋಗಶಾಲೆ ಅಥವಾ ದಟ್ಟ ಅನುಭವ ನೀಡುವ ಹೆಬ್ಬಾಳವನ್ನು ಈ ಕ್ಷೇತ್ರ ಒಡಲಲ್ಲಿಟ್ಟುಕೊಂಡಿದೆ. ಪ್ರತಿನಿಧಿಸಿದವರು ಪವರ್ ‘ಫುಲ್’, ಅಭಿವೃದ್ಧಿ ವಿಚಾರಕ್ಕೆ ಬಂದಾಗ ಡಲ್ ಎಂಬ ವೇದನೆ ಜನರಲ್ಲಿ ಮಡುಗಟ್ಟಿದೆ. ಕೆಂಗಲ್ ಹನುಮಂತಯ್ಯ, ಸಿ.ಕೆ.ಜಾಫರ್ ಶರೀಫ್, ಹಾಲಿ ಸಂಸದ ಡಿ.ವಿ.ಸದಾನಂದಗೌಡ ರೈಲ್ವೆ ಸಚಿವರಾಗಿದ್ದರು. ಸದಾನಂದಗೌಡರು ನಂತರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದರು. ‘ಹ್ಯಾಟ್ರಿಕ್ ರೈಲ್ವೆ’ ಸಚಿವರನ್ನು ಕಂಡ ಕ್ಷೇತ್ರ ಮೆಟ್ರೋ ಜಾಲದಿಂದ ವಂಚಿತವಾಗಿದೆ.

ಬದಲಾಯಿತು ಲೆಕ್ಕಾಚಾರ, ಕೆಮಿಸ್ಟ್ರಿ

ಭೌಗೋಳಿಕ ಸ್ವರೂಪ, ರಾಜಕೀಯ ಕೆಮಿಸ್ಟ್ರಿ, ಮತ ಲೆಕ್ಕಾಚಾರದಲ್ಲಿ ಕ್ಷೇತ್ರವು 2008ರಲ್ಲಿ ಅಸಾಧಾರಣ ಬದಲಾವಣೆ, ತಿರುವು ಕಂಡಿತು. 2008ರಲ್ಲಾದ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಶಿವಾಜಿನಗರ, ಸರ್ವಜ್ಞನಗರ, ಪುಲಕೇಶಿನಗರ ವಿಧಾನಸಭೆ ಕ್ಷೇತ್ರಗಳು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರಕ್ಕೆ ಸ್ಥಳಾಂತರವಾದರೆ, ಯಶವಂತಪುರ, ದಾಸರಹಳ್ಳಿ ಹಾಗೂ ಕೆ.ಆರ್.ಪುರ ಸೇರ್ಪಡೆಯಾದವು. ಚುನಾವಣಾ ರಾಜಕಾರಣದಲ್ಲಿ ಪಳಗಿದ ‘ಕೈ’ಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು, ‘ಕಮಲ’ ಫಳಫಳನೆ ಹೊಳೆಯುತ್ತಿದೆ.

ಸಂಸದರ ಹಾಜರಾತಿ: ಸಂಸದ ಡಿ.ವಿ.ಸದಾನಂದಗೌಡ ಲೋಕಸಭೆಯಲ್ಲಿ ಶೇ. 63 ಹಾಜರಾತಿ ಹೊಂದಿದ್ದಾರೆ. ಆದರೆ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ, ಯಾವುದೇ ಪ್ರಶ್ನೆ ಕೇಳಿಲ್ಲ.

15,767 ಕೋಟಿ ರೂ. ವೆಚ್ಚದ ರೈಲ್ವೇ ಕಾಮಗಾರಿ

ಸಂಸದ ಡಿ.ವಿ.ಸದಾನಂದ ಗೌಡ ಸತತ ಎರಡು ಬಾರಿ ಕ್ಷೇತ್ರದ ಸಂಸದರಾಗಿದ್ದು, ಕೆಲ ಯೋಜನೆ ಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮಂಜೂರು. 15,767 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯು 2025ಕ್ಕೆ ಸಂಚಾರಮುಕ್ತವಾಗುವ ನಿರೀಕ್ಷೆಯಿದೆ. 17 ರೈಲ್ವೆ ಕೆಳ ಮತ್ತು ಮೇಲ್ಸೇತುವೆ ಮಂಜೂರು ಮಾಡಿಸಿದ್ದಾರೆ. ಬೈಯಪ್ಪನಹಳ್ಳಿಯಲ್ಲಿ 376 ಕೋಟಿ ರೂ. ವೆಚ್ಚ ಹಾಗೂ ಯಶವಂತಪುರದಲ್ಲಿ 380 ಕೋಟಿ ರೂ. ವೆಚ್ಚದ ಅತ್ಯಾಧುನಿಕ ರೈಲ್ವೆ ಟರ್ವಿುನಲ್ ನಿರ್ವಣ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಪ್ರಯಾಣಿಕರ ತಂಗುದಾಣ, ತೆರೆದ ಮತ್ತು ಒಳಚರಂಡಿ, ಸಿಮೆಂಟ್ ಕಾಂಕ್ರೀಟ್ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ ಇತ್ಯಾದಿ ಕನಿಷ್ಠ ಅಗತ್ಯ ಸವಲತ್ತುಗಳ ಸೃಜನೆಗೆ 4.69 ಕೋಟಿ ರೂ. ವಿನಿಯೋಗ. ಬೆಂಗಳೂರು-ಮೈಸೂರು ರಾಷ್ಟ್ರೀಯ ಎಕ್ಸ್​ಪ್ರೆಸ್ ಹೆದ್ದಾರಿ ಮಂಜೂರು. ಈ ಕಾಮಗಾರಿಗೆ ಕೆಂಗೇರಿ ಬಳಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಅಡಿಪಾಯ.

- ಡಿ.ವಿ.ಸದಾನಂದಗೌಡ, ಬೆಂಗಳೂರು ಉತ್ತರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net