ಶೀಘ್ರವೇ ಬರಲಿದೆ ದಳಪತಿ ವಿಜಯ್​ ನಟನೆಯ 'ಲಿಯೋ 2'? ನಿರ್ದೇಶಕ ಲೋಕೇಶ್ ಕೊಟ್ರು ಸುಳಿವು!

ವಿಜಯವಾಣಿ - 2023-12-28T113537.737
Published on

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್​ ಹೀರೋ, ನಟ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಪ್ಯಾನ್ ಇಂಡಿಯಾ ಸಿನಿಮಾ 'ಲಿಯೋ' ಕಳೆದ ಅಕ್ಟೋಬರ್​ 19 ರಂದು ಜಾಗತಿಕವಾಗಿ ಬಿಡುಗಡೆಗೊಂಡು, ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿತು. ಈ ಸಿನಿಮಾ ತಂದುಕೊಟ್ಟ ಸಕ್ಸಸ್​ ಕುರಿತು ನಿರ್ದೇಶಕ ಲೋಕೇಶ್​ ಕನಕರಾಜ್​ ಸಿನಿಪ್ರೇಮಿಗಳು ಹಾಗೂ ವಿಜಯ್​ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಈ ಹಿಂದೆ ಎಲ್ಲೂ ಕೂಡ ಲಿಯೋ ಭಾಗ 2ರ ಬಗ್ಗೆ ಮಾಹಿತಿ ನೀಡದ ಲೋಕೇಶ್,​ ಇದೀಗ ದಳಪತಿ ಫ್ಯಾನ್ಸ್​ಗೆ ಸುಳಿವನ್ನು ನೀಡಿದ್ದಾರೆ. ಅಷ್ಟಕ್ಕೂ ಅದೇನು? ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುದರ ವಿವರ ಹೀಗಿದೆ.

'ಲಿಯೋ' ಸೇರಿದಂತೆ ತಮಿಳಿನ ಸೂಪರ್​ಸ್ಟಾರ್​ ರಜನಿಕಾಂತ್​ ಅಭಿನಯದ 'ತಲೈವರ್​ 171' ಚಿತ್ರವನ್ನು ನಿರ್ದೇಶಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿರುವ ಲೋಕೇಶ್​ ಕನಕರಾಜ್​, ಇತ್ತೀಚಿಗೆ ನಡೆದ ಸಂವಾದದಲ್ಲಿ ವಿಜಯ್​ನ ಒಳಗೊಂಡ 'ಲಿಯೋ 2' ಸಿನಿಮಾ ಶೀಘ್ರವೇ ನಿಮ್ಮ ಮುಂದೆ ಬರಲಿದೆ ಎಂದು ದಳಪತಿ ಫ್ಯಾನ್ಸ್​ಗೆ ಖಾತ್ರಿ ಪಡಿಸಿದ್ದಾರೆ.

'ಲಿಯೋ 2' ಚಿತ್ರದಲ್ಲಿ ವಿಜಯ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲಿದ್ದು, 'ತಲೈವರ್ 171' ಮತ್ತು 'ಕೈತಿ 2' ಸಿನಿಮಾಗಳ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕವೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದ್ದೇನೆ ಎಂದು ಲೋಕೇಶ್​ ತಿಳಿಸಿದ್ದಾರೆ. ಈ ಮೂಲಕ ದಳಪತಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರ್ದೇಶಕರು, ಅವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net