

ಬೆಂಗಳೂರು: ವಿಚಾರಣೆ ಎಷ್ಟು ಹೊತ್ತು ನಡೆಸಬೇಕೆಂದು ಲೋಕಾಯುಕ್ತ ಪೊಲೀಸರು ಬಿಜೆಪಿಯವರನ್ನು ಕೇಳಬೇಕಿತ್ತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(G Parameswara) ತಿರುಗೇಟು ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ಗಂಟೆ ಹತ್ತು ನಿಮಿಷ ವಿಚಾರಣೆ ಮಾಡಿದ್ದಾರೆ. ಬಿಜೆಪಿಯವರು ವಿನಾಕಾರಣ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪೊಲೀಸರು ಏನು ಕೇಳಬೇಕೋ ಅದನ್ನು ಕೇಳಿದ್ದಾರೆ. ಅದಕ್ಕೆ ಸಿಎಂ ಸಮಂಜಸ ಉತ್ತರ ಕೊಟ್ಟಿದ್ದಾರೆ. ಎರಡು ಗಂಟೆ ಹತ್ತು ನಿಮಿಷ ವಿಚಾರಣೆ ಆಗಿದೆ. ಇನ್ನೂ ಎಷ್ಟು ಬೇಕೋ ಅಷ್ಟು ಪ್ರಶ್ನೆ ಕೇಳಬಹುದಿತ್ತು. ಬಿಜೆಪಿ ಅವರ ಟೀಕೆ ಏನಿದೆ? ದಿನವಿಡೀ ವಿಚಾರಣೆ ಮಾಡಬೇಕೆ? ಅವರಿಗೆ ಏನು ಪ್ರಶ್ನೆ ಬೇಕೋ ಅದನ್ನ ಕೇಳಿದ್ದಾರೆ. ಬಿಜೆಪಿಯವರನ್ನು ಕೇಳಿ ವಿಚಾರಣೆ ಮಾಡಬೇಕೆ? ಇಷ್ಟೇ, ಇಂತಹದ್ದೇ ಪ್ರಶ್ನೆ ಕೇಳಬೇಕೆಂಬುದು ಏನಾದರೂ ಇದೆಯೆ? ಎಂದು ಪ್ರಶ್ನಿಸಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತ ಪ್ರಶ್ನೆಗೆ, ದೂರು ಕೊಟ್ಟಿದ್ದರೆ ತನಿಖೆ ಆಗುತ್ತದೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯಬಾರದು. ಅವರು ಭ್ರಷ್ಟಾಚಾರ ಮಾಡಿದ್ದಾರೆ, ಇವರು ಮಾಡಿದ್ದಾರೆ ಎಂದರೆ ಹೇಗೆ? ನಿರ್ದಿಷ್ಟವಾಗಿ ಏನಾದರೂ ಇದ್ದರೆ ಪರವಾಗಿಲ್ಲ. ದೂರು ಕೊಟ್ಟರೆ ಸಂಬಂಧಪಟ್ಟವರು ತನಿಖೆ ಮಾಡುತ್ತಾರೆ ಎಂದು ಡಾ.ಪರಮೇಶ್ವರ ಉತ್ತರಿಸಿದರು.