ಪಾಲಿಕೆ ಕ್ರಮಕ್ಕೆ ಲೋಕಾಯುಕ್ತ ಆಕ್ರೋಶ

lokayukta meeting
ಶಿವಮೊಗ್ಗ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳ ಎದುರು ಸಾರ್ವಜನಿಕರೊಬ್ಬರು ಅಹವಾಲು ಸಲ್ಲಿಸಿದರು. ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಪ್ರಕಾಶ್, ಸುರೇಶ್, ತಹಸೀಲ್ದಾರ್ ರಾಜೀವ್ ಇದ್ದರು.
Published on

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ವಾರ, ತಿಂಗಳು, ವರ್ಷವಿಡೀ ಕಚೇರಿಗೆ ಅಲೆದಾಡಬೇಕು. ಕೆಳಹಂತದ ನೌಕರರದ್ದೇ ಅಲ್ಲಿ ದರ್ಬಾರ್. ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಮೇಲಧಿಕಾರಿಗಳೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ದೂರುಗಳು ಲೋಕಾಯುಕ್ತ ಅಧಿಕಾರಿಗಳಿಗೆ ಎದುರಾದವು.

ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಪಾಲಿಕೆಯಲ್ಲಿನ ಅವ್ಯವಸ್ಥೆಯನ್ನು ಜನರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಖುದ್ದು ಲೋಕಾಯುಕ್ತ ಅಧಿಕಾರಿಗಳೇ ಪಾಲಿಕೆ ಆಯುಕ್ತರಿಗೆ ದೂರವಾಣಿ ಕರೆ ಮಾಡಿದರು. ಒಂದಲ್ಲ, ಎರಡಲ್ಲ, ಮೂರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಹಿಂದಿನ ಸಭೆಗಳಂತೆ ಗುರುವಾರ ನಡೆದ ಸಭೆಗೂ ಪಾಲಿಕೆ ಅಧಿಕಾರಿಗಳು ಗೈರಾಗಿದ್ದು ಪಾಲಿಕೆಗೆ ಸಂಬಂಧಿಸಿದ ದೂರುಗಳ ಬಗ್ಗೆ ಪ್ರತಿಕ್ರಿಯಿಸಲು ಯಾರೂ ಬಂದಿರಲಿಲ್ಲ. ಮುಕ್ತಾಯದ ವೇಳೆಗೆ ನೌಕರನೊಬ್ಬ ಸಭೆಯಲ್ಲಿ ಕಂಡರು. ಮೇಲಧಿಕಾರಿಗಳ ಬದಲು ಕೆಳಹಂತದ ನೌಕರ ಆಗಮಿಸಿದ್ದಕ್ಕೆ ಸಿಡಿಮಿಡಿಗೊಂಡ ಅಧಿಕಾರಿಗಳು, ಮಹಾನಗರ ಪಾಲಿಕೆಯಿಂದ ಈ ರೀತಿಯ ನಿರ್ಲಕ್ಷ್ಯ ಸಲ್ಲದು. ಇದು ಮುಂದುವರಿದರೆ ನಾವೇ ಪಾಲಿಕೆಗೆ ನೇರ ಪ್ರವೇಶ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಲೋಕಾಯುಕ್ತ ಇನ್‌ಸ್ಪೆೆಕ್ಟರ್‌ಗಳಾದ ಪ್ರಕಾಶ್, ಸುರೇಶ್, ತಹಸೀಲ್ದಾರ್ ರಾಜೀವ್, ತಾಪಂ ಅಧಿಕಾರಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net