ಲಾಕರ್‌ಗಳ ಜಾಲಾಡಿದ ಲೋಕಾಯುಕ್ತ ಅಧಿಕಾರಿಗಳು

lokayukta-1704779717
Published on

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಗುರುವಾರ ೧೧ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ೫೬ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯಾಚರಣೆ ಮುಕ್ತಾಯಗೊಳಿಸಿದ್ದಾರೆ.
ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಚಿತ್ರದುರ್ಗ, ಮಂಡ್ಯ, ಕೋಲಾರ, ಮೈಸೂರು, ಹಾಸನ ಮತ್ತು ಕಲಬುರಗಿ ಸೇರಿದಂತೆ ರಾಜ್ಯದ ೧೦ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಲೋಕಾಯುಕ್ತದ ಪೊಲೀಸ್ ವಿಭಾಗದ ಎಸ್‌ಪಿಗಳೂ ಸೇರಿದಂತೆ ೧೦೦ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ಲೋಕಾಯುಕ್ತ ದಾಳಿಯ ವೇಳೆ ೧೧ ಅಧಿಕಾರಿಗಳ ಬಳಿ ಆದಾಯಕ್ಕೂ ಮೀರಿ ೪೫ ಕೋಟಿ ರೂ. ಆಸ್ತಿ ಇರುವುದು ಪತ್ತೆಯಾಗಿತ್ತು.

ಲಾಕರ್‌ಗಳ ಪರಿಶೀಲನೆ:
ದಾಳಿಗೊಳಗಾದ ಅಧಿಕಾರಿಗಳಲ್ಲಿ ಕೆಲವರು ಬ್ಯಾಂಕ್ ಲಾಕರ್‌ಗಳಲ್ಲಿ ಆಸ್ತಿ ಪತ್ರ ಮತ್ತು ನಗದು, ಚಿನ್ನಾಭರಣವನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಟ್ಟಿರುವುದು ಪತ್ತೆಯಾಗಿತ್ತು. ಆರೋಪಿತರನ್ನು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಕರೆದೊಯ್ದ ಲೋಕಾಯುಕ್ತ ಅಧಿಕಾರಿಗಳು ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲನೆ ನಡೆಸಿ ಅದರಲ್ಲಿದ್ದ ಆಸ್ತಿ ಪತ್ರ, ಚಿನ್ನಾಭರಣ ಮತ್ತು ನಗದನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕೆಲವು ಅಧಿಕಾರಿಗಳು ಲಾಕರ್‌ಗಳ ಕೀ ನೀಡಲು ಅಧಿಕಾರಿಗಳಿಗೆ ಸತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಕೀ ಮೇಕರ್ಸ್‌ಗಳನ್ನು ಕರೆಯಿಸಿ ಲಾಕರ್‌ಗಳನ್ನು ತೆಗೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯದಲ್ಲಿಯೇ ನೋಟಿಸ್ ಕೊಟ್ಟು ವಿಚಾರಣೆ
ಶುಕ್ರವಾರವು ಶೋಧ ಕಾರ್ಯ ಮುಂದುವರಿಸಿದ್ದ ಲೋಕಾಯುಕ್ತ ಅಧಿಕಾರಿಗಳು ರಾತ್ರಿಯ ವೇಳೆಗೆ ದಾಳಿ ಮುಕ್ತಾಯಗೊಳಿಸಿದ್ದು, ಆರೋಪಿತರ ಬಳಿ ಪತ್ತೆಯಾಗಿರುವ ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಸರ್ಕಾರಿ ಅಧಿಕಾರಿಗಳಿಗೆ ಸದ್ಯದಲ್ಲಿಯೇ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net