ಜಿಲ್ಲಾವಾರು ಭ್ರಷ್ಟರ ಪಟ್ಟಿ ಸಿದ್ಧ: ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

lokayukta judge b.s.patil
Published on

ಶಿವಮೊಗ್ಗ: ಪ್ರತಿ ಜಿಲ್ಲೆಯಲ್ಲೂ ಜನಸಾಮಾನ್ಯರಿಗೆ ಕಂಟಕ(ನಟೋರಿಯಸ್) ಆಗಿರುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದು ಕಚೇರಿಗಳು ಅಥವಾ ಇಲಾಖೆಗಳ ಮೇಲೆ ದಿಢೀರ್ ದಾಳಿ ನಡೆಸಿ ಭ್ರಷ್ಟ ವ್ಯವಸ್ಥೆಯನ್ನು ಮಟ್ಟ ಹಾಕಲು ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರಸ್ತುತ ಲೋಕಾಯುಕ್ತದಲ್ಲಿ ಪೂರ್ಣ ಪ್ರಮಾಣದ ಅಧಿಕಾರಿ-ಸಿಬ್ಬಂದಿಗಳಿದ್ದು, ಅವರ ಸಹಾಯದಿಂದ ಭ್ರಷ್ಟರ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಲಿದ್ದೇವೆ ಎಂದರು.

ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಲೋಕಾಯುಕ್ತಕ್ಕೆ ಸರ್ಕಾರ ಬಲ ತುಂಬಿದೆ. 24ರಿಂದ 25 ಎಸ್ಪಿಗಳು, 48ರಿಂದ 50 ಡಿವೈಎಸ್ಪಿಗಳಿದ್ದಾರೆ. ನ್ಯಾಯಾಂಗ ವಿಭಾಗ, ಪೊಲೀಸ್ ವಿಭಾಗ, ಆಂತರಿಕ ಗುಪ್ತಚರ ವಿಭಾಗ, ಆಡಳಿತ ವಿಭಾಗ, ತಾಂತ್ರಿಕ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಭ್ರಷ್ಟಚಾರ ಮುಕ್ತ ಸಮಾಜಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ಬಹಳಷ್ಟು ಅಧಿಕಾರಿಗಳು ಆದಾಯದ ಮೂಲಕ್ಕಿಂತ ಹೆಚ್ಚು ಸಂಪಾದನೆ ಮಾಡಿ ಬಂಗಲೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಪ್ರಾಮಾಣಿಕವಾಗಿ ದುಡಿದು ಬದುಕು ಕಟ್ಟಿಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಜನಸಾಮಾನ್ಯರ ಹಣದಿಂದ ಐಷಾರಾಮಿ ಜೀವನ ನಡೆಸುವುದಕ್ಕೆ ನಾವು ಬಿಡುವುದಿಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಡಿಸಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ, ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ, ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯುಂಜಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net