ನಗರ ಪಾಲಿಕೆ ಸಿಬ್ಬಂದಿ ವರ್ತನೆಗೆ ಲೋಕಾಯುಕ್ತ ಗರಂ

lokayukta
ಶಿವಮೊಗ್ಗ ತಾಲೂಕು ಮಟ್ಟದ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುರೇಶ್ ಅಹವಾಲು ಸ್ವೀಕರಿಸಿದರು. ಅವಿನಾಶ್, ಪ್ರಕಾಶ್ ಇದ್ದರು.
Published on

ಶಿವಮೊಗ್ಗ: ನಗರ ಪಾಲಿಕೆಯಲ್ಲಿ ಎಲ್ಲವೂ ನಿಧಾನ. ಸಿಬ್ಬಂದಿ ಜನರಿಗೆ ಸ್ಪಂದಿಸುವುದಿಲ್ಲ ಎಂಬ ದೂರುಗಳು ಕೇಳಿ ಬರುವುದು ಸಾಮಾನ್ಯ. ಆದರೆ ಪಾಲಿಕೆ ಆಯುಕ್ತರೂ ಸೇರಿ ಹಿರಿಯ ಅಧಿಕಾರಿಗಳು ಲೋಕಾಯುಕ್ತ ಪೊಲೀಸರಿಗೂ ಸ್ಪಂದಿಸುವುದಿಲ್ಲ ಎಂಬ ಸಂಗತಿ ಬಹಿರಂಗವಾಗಿದೆ. ಪಾಲಿಕೆ ಸಿಬ್ಬಂದಿ ವರ್ತನೆಗೆ ಈಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ಗರಂ ಆಗಿದ್ದಾರೆ.

ಶಿವಮೊಗ್ಗದಲ್ಲಿ ಲೋಕಾಯುಕ್ತದಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಕುಂದು ಕೊರತೆ ಸಭೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಗೆ ಪಾಲಿಕೆಯಿಂದ ಯಾವ ಅಧಿಕಾರಿಯೂ ಬರುತ್ತಿಲ್ಲ. ಪಾಲಿಕೆಗೆ ಸಂಬಂಧಿಸಿ ಅನೇಕ ದೂರುಗಳು ಬರುತ್ತಿವೆ. ಕಳೆದ ಸಭೆಯಲ್ಲಿ ಸಲ್ಲಿಕೆಯಾದ ದೂರುಗಳಿಗೆ ಕೈಗೊಂಡ ಕ್ರಮಗಳೇನು ಎಂಬುದರ ವಿವರ ನೀಡಲು ಪಾಲಿಕೆಯಿಂದ ಯಾರೂ ಬಂದಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಲೋಕಾಯುಕ್ತ ಸಿಬ್ಬಂದಿ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದರು. ಆದರೆ ಆಯುಕ್ತರು ಕರೆ ಸ್ವೀಕರಿಸಲಿಲ್ಲ. ಇದರಿಂದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಮತ್ತಷ್ಟು ಗರಂ ಆದರು. ಕಳೆದ ಸಭೆಯಲ್ಲಿ ಪಾಲಿಕೆ ವಿರುದ್ಧ ಐದು ದೂರುಗಳು ಬಂದಿದ್ದವು. ಇದಕ್ಕೆ ಪಾಲಿಕೆಯಿಂದ ಒಂದಕ್ಕೆ ಮಾತ್ರ ಉತ್ತರ ಬಂದಿದೆ. ಪಾಲಿಕೆ ಅಧಿಕಾರಿಗಳು ನಮ್ಮ ಸಭೆ ಬಗ್ಗೆ ನಿರ್ಲಕ್ಷೃ ತೋರುತ್ತಿರುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯುವುದು ಒಳ್ಳೆಯದು ಎಂದು ಸುರೇಶ್ ಅಭಿಪ್ರಾಯಪಟ್ಟರು.
ಕಳೆದ ತಿಂಗಳು ನಡೆದಿದ್ದ ಕುಂದು ಕೊರತೆ ಸಭೆಯಲ್ಲಿ ಸಲ್ಲಿಕೆಯಾಗಿದ್ದ ದೂರೊಂದಕ್ಕೆ ಸಂಬಂಧಿಸಿ ಪರಿಹಾರ ಸಿಕ್ಕಿರುವ ಬಗ್ಗೆ ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಕುಂಸಿ ಗ್ರಾಮಸ್ಥರಿಗೆ ಜಮೀನಿಗೆ ತೆರಳುವ ರಸ್ತೆಗಾಗಿ ಸರ್ವೇ ನಡೆಸಲು ತಹಸೀಲ್ದಾರ್ ಗಿರೀಶ್ ಸೂಚಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಸುರೇಶ್ ಹೇಳಿದರು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಪ್ರಕಾಶ್, ತಾಪಂ ಇಒ ಅವಿನಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net