ಡಿ.ಕೆ.ಶಿವಕುಮಾರ್ ವಿರುದ್ದ ಎ್ಐಆರ್ ದಾಖಲಿಸಿದ ಲೋಕಾಯುಕ್ತ

dkshivakumar
Published on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಡು ತನಿಖೆ ಆರಂಭಿಸಿದ್ದಾರೆ.
ಸಿಬಿಐಗೆ ತನಿಖೆಗೆ ವಹಿಸಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದ ಹಿನ್ನೆಲೆಯಲ್ಲಿ ಸಿಬಿಐಯಲ್ಲಿದ್ದ ಪ್ರಕರಣವನ್ನು ಮರು ತನಿಖೆಗೆ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಪತ್ರ ಬರೆದಿದೆ. ಆದರೆ, ಸಿಬಿಐ ಈವರೆಗೂ ಲೋಕಾಯುಕ್ತಕ್ಕೆ ಸಂಬಂಧಿಸಿದ ದಾಖಲೆ ಒದಗಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ:
ಗುಜರಾತ್‌ನಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆಯಲ್ಲಿ ಅಲ್ಲಿನ ೪೨ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನ ಬಿಡದಿ ಸಮೀಪದ ಈಗಲ್‌ಟನ್ ರೆಸಾರ್ಟ್‌ನಲ್ಲಿ ಉಳಿಯಲು ಡಿ.ಕೆ ಶಿವಕುಮಾರ್ ವ್ಯವಸ್ಥೆ ಮಾಡಿದ್ದರು. ಈ ಶಾಸಕರ ಜವಾಬ್ದಾರಿಯನ್ನು ಇವರೇ ವಹಿಸಿದ್ದರು. ಅದೇ ಸಂದರ್ಭದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರ ಕನಕಪುರ ಮನೆ, ಬೆಂಗಳೂರಿನ ನಿವಾಸ, ಕಚೇರಿ ಹಾಗೂ ಆಪ್ತರ ಮನೆಗಳು ಸೇರಿದಂತೆ ೩೯ ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಇಡಿಯಿಂದ ಬಂಧನ:
ಐಟಿ ಅಧಿಕಾರಿಗಳ ದಾಳಿ ವೇಳೆ ಸುಮಾರು ೭.೫ ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಐಟಿ ಅಧಿಕಾರಿಗಳು ಮಾಹಿತಿ ಆಧಾರದ ಮೇಲೆ ಜಾರಿನಿರ್ದೇಶನಾಯ (ಇ.ಡಿ) ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದರು. ವಿಚಾರಣೆಯ ಸಲುವಾಗಿ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಇಡಿ ತನಿಖೆಯನ್ನು ಆಧಾರಿಸಿ ಸಿಬಿಐ ಕೂಡ ತನಿಖೆಗೆ ಇಳಿದಿತ್ತು. ಡಿ.ಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರದ ಅನುಮತಿಯನ್ನು ಕೋರಲಾಗಿತ್ತು. ೨೦೧೯ರ ಸೆಪ್ಟೆಂಬರ್ ೨೫ ರಂದು ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಸಿಬಿಐ ಅಧಿಕಾರಿಗಳು ೨೦೨೦ರ ಅಕ್ಟೋಬರ್ ೩ ರಂದು ಡಿ.ಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದೆ.

ತನಿಖೆ ಆದೇಶ ವಾಪಸ್ ಪಡೆದ ಸರ್ಕಾರ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಿಬಿಐ ತನಿಖೆಗೆ ವಹಿಸಿರುವ ಆದೇಶವನ್ನು ವಾಪಸ್ ಪಡೆದುಕೊಂಡಿತ್ತು. ಡಿಕೆಶಿ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಕಾನೂನಾತ್ಮಕವಾಗಿ ಇಲ್ಲ. ಸ್ಪೀಕರ್ ಅನುಮತಿ, ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯದೇ ತನಿಖೆಗೆ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು. ಈ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಜತೆ ಜೆಡಿಎಸ್ ನಾಯಕರ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳಜು ನಡೆದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net