ಭೂಮಾಪನ ಇಲಾಖೆಯ ಕಚೇರಿಗಳ ಮೇಲೆ ಲೋಕಾ ದಾಳಿ: ನಗದು ಸೇರಿ ಕೆಲ ದಾಖಲೆಗಳು ವಶ

karnataka-lokayukta
Published on

ಬೆಂಗಳೂರು: ಭೂಮಾಪನ ಇಲಾಖೆಯ ಕಚೇರಿಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿರುವ ಆರೋಪದ ಕೇಳಿ ಬಂದ ಹಿನ್ನೆಯಲ್ಲಿ ಸೋಮವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದ 11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ನಗದು ಸೇರಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.


ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು ಪೂರ್ವ ತಾಲೂಕು, ಯಲಹಂಕ, ಬೆಂಗಳೂರು ಗ್ರಾಮಾಂತರ ತಾಲೂಕುಗಳಾದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಮತ್ತು ಆನೇಕಲ್ ಸೇರಿ ಒಟ್ಟು ೧೧ ಭೂ ಮಾಪನ ಕಚೇರಿಗಳ ಮೇಲೆ ಲೋಕಾಯುಕ್ತದ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ.


ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರ ಆದೇಶದಂತೆ ಲೋಕಾಯುಕ್ತದ ನ್ಯಾಯಾಂಗ ಮತ್ತು ಪೊಲೀಸ್ ವಿಭಾಗಗಳ ಅಧಿಕಾರಿಗಳು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.


ದೂರು ಆಧರಿಸಿ ದಾಳಿ:
ಭೂಮಾಪನ ಇಲಾಖೆಯ ಕಚೇರಿಗಳಲ್ಲಿ ಅವ್ಯಾತವಾಗಿ ಭ್ರಷ್ಟಚಾರ ನಡೆಯುತ್ತಿರುವ ಸಂಬಂಧ ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ಹಲವಾರು ದೂರುಗಳು ಬಂದಿದ್ದವು. ಲೋಕಾಯುಕ್ತರು ಅಧಿಕಾರಿಗಳ ಮುಖೇನ ಗೌಪ್ಯ ತನಿಖೆಯನ್ನು ನಡೆಸಿ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿ ಕಚೇರಿಗಳಲ್ಲಿ ಶೋಧ ನಡೆಸಲಾಯಿತು.
ಭೂಮಾಪನ, ಹದ್ದುಬಸ್ತು, ನಕ್ಷೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಕುರಿತು ಪರಿಶೀಲನೆ ನಡೆಸಲಾಯಿತು. ಕಚೇರಿ ಒಳಗಿನ ಕಂಪ್ಯೂಟರ್ ದಾಖಲೆಗಳು ಸೇರಿ ಅಧಿಕಾರಿಗಳಿಗೆ ಸಂಬಂಧಪಟ್ಟ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿದರು.


ಖುದ್ದು ಲೋಕಾಯುಕ್ತರಿಂದ ಪರಿಶೀಲನೆ:
ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು ಖುದ್ದಾಗಿ ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿರುವ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಭೂಮಾಪನ ಕಚೇರಿಗಳಿಗೆ ಸಂಜೆ ಭೇಟಿ ನೀಡಿ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ನಂತರ ಬೆಂಗಳೂರು ಪೂರ್ವ (ಕೆ.ಆರ್. ಪುರ) ತಾಲೂಕು ಕಚೇರಿಯಲ್ಲಿರುವ ಭೂಮಾಪನ ಇಲಾಖೆ ಕಚೇರಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.


೪೩ ಸಾವಿರ ನಗದು ಪತ್ತೆ:
ಕೆ.ಜಿ ರಸ್ತೆಯ ಕಂದಾಯ ಭವನದಲ್ಲಿರುವ ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸಿಬ್ಬಂದಿಯೊಬ್ಬರ ಬಳಿ ೪೩ ಸಾವಿರ ರೂ.ನಗದು ಪತ್ತೆಯಾಗಿದೆ. ಈ ಬಗ್ಗೆ ಆತನನ್ನು ವಿಚಾರಣೆ ನಡೆಸಿದ ವೇಳೆ ತನ್ನ ಮಗಳ ಶಾಲಾ ಶುಲ್ಕ ಪಾವತಿಸಲು ಹಣ ಇಟ್ಟುಕೊಂಡಿರುವುದಾಗಿ ಸಬೂಬು ನೀಡಿದ್ದಾನೆ. ಇದರಿಂದ ಗರಂ ಆದ ಲೋಕಾಯುಕ್ತರು ಹಣ ತಂದಿರುವ ಬಗ್ಗೆ ರಿಜಿಸ್ಟರ್‌ನಲ್ಲಿ ಏಕೆ ಉಲ್ಲೇಖಿಸಲಿಲ್ಲ ಎಂದು ಪ್ರಶ್ನಿಸಿದ್ದಾಗ ಆತ ತಬ್ಬಿಬು ಆಗಿದ್ದಾನೆ. ಬಳಿಕ ಆ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ವಿನಾಕಾರಣ ಅರ್ಜಿಗಳನ್ನು ತಿರಸ್ಕಾರ:
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ನಗರದ ಎಲ್ಲಾ ಭೂ ದಾಖಲೆಗಳ ಸಹಾಯ ನಿರ್ದೇಶಕರ ಕಚೇರಿಗಳಿಗೆ ದಿಢೀರ್ ಭೇಟಿ ನೀಡಲಾಗುತ್ತಿದೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದಿದ್ದೇವೆ. ಸಾರ್ವಜನಿಕರ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಿದ್ದಾರೆ. ನಿಜವಾಗಲೂ ಸಮಸ್ಯೆ ಇದ್ದಲ್ಲಿ ಅರ್ಜಿ ತಿರಸ್ಕರಿಸಬಹುದು. ಈ ಕಚೇರಿಗಳಲ್ಲಿ ರಿಜಿಸ್ಟರ್ ಸಹ ಸರಿಯಾಗಿ ಇಲ್ಲ. ನಗರಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತೇವೆ ಎಂದರು.
ಇಲ್ಲಿನ ಕಚೇರಿಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಕಚೇರಿಯಲ್ಲಿ ಸರಿಯಾಗಿ ಕೆಲಸವಾಗುತ್ತಿಲ್ಲ. ಕಚೇರಿ ಒಳಗೆ ಖಾಸಗಿ ವ್ಯಕ್ತಿ ಜೆರಾಕ್ಸ್ ಯಂತ್ರ ಇಟ್ಟಿದ್ದಾರೆ. ಅದಕ್ಕೆ ಅನುಮತಿ ನೀಡಿದವರು ಯಾರು? ಅದಕ್ಕೆ ಮೌಖಿಕ ಅನುಮತಿ ನೀಡಿದ್ದಾರೆ. ಆದರೆ, ಇದು ಕಚೇರಿ ನಡೆಸುವ ಸರಿಯಾದ ರೀತಿಯಲ್ಲ. ಶೌಚಾಲಯದ ರೀತಿ ಕಚೇರಿ ನಿರ್ವಹಿಸಿದ್ದಾರೆ. ಪರಿಶೀಲನೆ ಮುಂದುವರಿದಿದ್ದು, ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net