

ನವದೆಹಲಿ: ಸುಮಾರು 63 ವರ್ಷಗಳಷ್ಟು ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸುವ ಪ್ರಮುಖ ಶಾಸನವಾದ ‘ಆದಾಯ ತೆರಿಗೆ ಮಸೂದೆ (ನಂ.2) 2025’ ಅನ್ನು ಲೋಕಸಭೆಯಲ್ಲಿ ಸೋಮವಾರ ಕೇವಲ ಮೂರು ನಿಮಿಷಗಳಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್), ವಿನಾಯಿತಿಗಳು ಮತ್ತು ಇತರ ಸಂಕೀರ್ಣ ನಿಬಂಧನೆಗಳನ್ನು ಈ ಮಸೂದೆ ಸರಳಗೊಳಿಸುತ್ತದೆ. ವಿಳಂಬವಾಗಿ ಫೈಲಿಂಗ್ ಮಾಡಿದವರಿಗೆ ದಂಡವಿಲ್ಲದೆ ರೀಫಂಡ್ಗೂ ಇದು ಅವಕಾಶ ನೀಡುತ್ತದೆ.
ಲೋಕಸಭೆಯಲ್ಲಿ ಬಿಹಾರದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ (ಎಸ್ಐಆರ್) ಅಕ್ರಮ ಕುರಿತ ಗದ್ದಲ, ಕಲಾಪಕ್ಕೆ ಅಡ್ಡಿ ಮುಂತಾದ ಘಟನೆಗಳ ಮಧ್ಯೆಯೇ ಈ ಮಸೂದೆ ಅಂಗೀಕಾರಗೊಂಡಿತು. ಫೆಬ್ರವರಿಯಲ್ಲಿ ತಾವು ಮಂಡಿಸಿದ್ದ ‘ಆದಾಯ ತೆರಿಗೆ ಮಸೂದೆ, 2025’ ಅನ್ನು ಆ. 8ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಪಸ್ ಪಡೆದಿದ್ದರು. ಸಂಸದೀಯ ಸಮಿತಿಯ ಶಿಫಾರಸುಗಳನ್ನು ಸೇರಿಸಿ ನವೀಕೃತ ಮಸೂದೆಯನ್ನು ಸೋಮವಾರ ಮಂಡಿಸಿದರು. ವಿರೋಧ ಪಕ್ಷಗಳ ಘೊಷಣೆ ನಡುವೆ, ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಈಗ ಈ ಮಸೂದೆ ರಾಜ್ಯಸಭೆಯ ಅನುಮೋದನೆಗೆ ಹೋಗಲಿದ್ದು, ನಂತರ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿ ಅಂಕಿತ ಬಿದ್ದ ಬಳಿಕ ಇದು ಕಾನೂನಾಗಲಿದೆ.
‘ಪ್ರಸ್ತುತ ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆಯ ಗಾತ್ರ ಮತ್ತು ಸಂಕೀರ್ಣತೆಯನ್ನು ಹೊಸ ಮಸೂದೆ ಕಡಿಮೆ ಮಾಡುತ್ತದೆ. ವಿಭಾಗಗಳು ಮತ್ತು ಅಧ್ಯಾಯಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಪದಗಳ ಸಂಖ್ಯೆಯನ್ನು ಅರ್ಧದಷ್ಟು ಇಳಿಸಿದೆ. ಸಂಸದೀಯ ಸಮಿತಿಯ ಬಹುತೇಕ ಶಿಫಾರಸುಗಳನ್ನು ಸರ್ಕಾರ ಇದರಲ್ಲಿ ಸೇರಿಸಿದೆ. ಜೊತೆಗೆ, ಕಾನೂನಿನ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸುವ ಮಾಹಿತಿಯನ್ನು ಅಳವಡಿಸಲಾಗಿದೆ’ ಎಂದು ಮಸೂದೆಯ ಉದ್ದೇಶ ಕುರಿತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೌಲ್ಯಮಾಪನ ವರ್ಷ ಮತ್ತು ಹಿಂದಿನ ವರ್ಷದ ಗೊಂದಲದ ಪರಿಕಲ್ಪನೆಗಳನ್ನು ತೆಗೆದುಹಾಕಿ, ತೆರಿಗೆ ವರ್ಷ ಎಂಬ ಸರಳ ಪರಿಕಲ್ಪನೆಯನ್ನು ಈ ಮಸೂದೆ ಪರಿಚಯಿಸುತ್ತದೆ. ಆದಾಯ ತೆರಿಗೆ ರಿಟರ್ನ್ ವಿಳಂಬವಾಗಿ ಫೈಲ್ ಮಾಡುವವರಿಗೆ ರೀಫಂಡ್ ಒದಗಿಸುವುದಕ್ಕೂ ಅವಕಾಶವಿರುವ ನಿಬಂಧನೆಯನ್ನು ಇದರಲ್ಲಿ ಸೇರಿಸಲಾಗಿದೆ. ಶಿಕ್ಷಣ ಉದ್ದೇಶಕ್ಕಾಗಿ ಲಿಬರಲೈಸ್ಡ್ ರೆಮಿಟನ್ಸ್ ಸ್ಕೀಮ್ (ಎಲ್ಆರ್ಎಸ್) ಬಳಸಿ ಹಣ ರವಾನಿಸಿದ್ದರೆ ಅದಕ್ಕೆ ಶೂನ್ಯ ಟಿಸಿಎಸ್ (ಟ್ಯಾಕ್ಸ್ ಕಲೆಕ್ಷನ್ ಆಟ್ ಸೋರ್ಸ್) ಸೌಲಭ್ಯ ಒದಗಿಸಲಾಗಿದೆ.
ಹಳೆಯ ಆದಾಯ ತೆರಿಗೆ ಕಾಯ್ದೆಯಂತೆ, ಹೊಸ ಮಸೂದೆ ಕೂಡ ಎಲ್ಲ ಧಾರ್ವಿುಕ-ಚಾರಿಟಬಲ್ ಟ್ರಸ್ಟ್ ಗಳಿಗೆ ಗುಪ್ತ ದಾನಕ್ಕೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಮುಂದುವರಿಸುತ್ತದೆ. ಫೆಬ್ರವರಿಯಲ್ಲಿ ತಂದಿದ್ದ ಮೂಲ ಮಸೂದೆ ಈ ವಿನಾಯಿತಿಗಳನ್ನು ತೆಗೆದುಹಾಕಿತ್ತು. ಮಸೂದೆಯ ಷರತ್ತು 187ರಲ್ಲಿ ವೃತ್ತಿ ಎಂಬ ಪದವನ್ನು ಸೇರಿಸಲಾಗಿದ್ದು, ವಾರ್ಷಿಕ 50 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಇರುವ ವೃತ್ತಿಪರರಿಗೆ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಸೌಲಭ್ಯವನ್ನು ನೀಡುತ್ತದೆ. ಟಿಡಿಎಸ್ ತಿದ್ದುಪಡಿ ಹೇಳಿಕೆಗಳ ದಾಖಲಾತಿ ಅವಧಿಯನ್ನು 6 ವರ್ಷಗಳಿಂದ 2 ವರ್ಷಗಳಿಗೆ ಇಳಿಸಲಾಗಿದೆ. ಇದು ತೆರಿಗೆದಾರರ ದೂರುಗಳನ್ನು ಕಡಿಮೆ ಮಾಡಲಿದೆ ಎಂದು ಸಿಬಿಡಿಟಿ ಮೂಲಗಳು ತಿಳಿಸಿವೆ.
ಗುಪ್ತ ದಾನಗಳಿಗೆ ತೆರಿಗೆ ವಿನಾಯಿತಿಯನ್ನು ಧಾರ್ವಿುಕ ಟ್ರಸ್ಟ್ಗಳಿಗೆ ಮಾತ್ರ ನೀಡಲಾಗಿದೆ. ಶಿಕ್ಷಣ ಅಥವಾ ಆಸ್ಪತ್ರೆಯಂತಹ ಚಾರಿಟಬಲ್ ಕಾರ್ಯಗಳಿಗೆ ದಾನಗಳಿಗೆ ತೆರಿಗೆ ವಿಧಿಸಲಾಗುವುದು. ನಾನ್ ಪ್ರಾಫಿಟ್ ಆರ್ಗನೈಸೇಷನ್ಗಳ ಹಣ ಸ್ವೀಕಾರದ ರಸೀದಿಗಳ ಬದಲಿಗೆ ಆದಾಯವನ್ನು ತೆರಿಗೆಗೆ ಒಳಪಡಿಸುವಂತೆ ಸಮಿತಿ ಶಿಫಾರಸು ಮಾಡಿದೆ.
ಇದೇ ವೇಳೆ, ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ 2025 ಕೂಡ ಅಂಗೀಕಾರಗೊಂಡಿತು. ಈ ಮಸೂದೆ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಸದಸ್ಯರಿಗೆ ತೆರಿಗೆ ವಿನಾಯಿತಿಯನ್ನು ವಿಸ್ತರಿಸುತ್ತದೆ. ಆದಾಯ ತೆರಿಗೆ ಶೋಧದ ಕೇಸ್ಗಳಿಗೆ ಬ್ಲಾಕ್ ಮೌಲ್ಯಮಾಪನದಲ್ಲಿ ಮಾರ್ಪಾಡುಗಳನ್ನು ಇದು ಒಳಗೊಂಡಿದೆ. ಇದು ಕೂಡ ರಾಜ್ಯಸಭೆಯ ಅನುಮೋದನೆಗೆ, ನಂತರ ರಾಷ್ಟ್ರಪತಿ ಅಂಕಿತಕ್ಕೆ ಹೋಗಲಿದೆ. ಇದರ ಪ್ರಮುಖ ಅಂಶಗಳು ಇಂತಿವೆ. 2025ರ ಏ. 1ರಿಂದ ಜಾರಿಯಾದ ಯುಪಿಎಸ್ಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಅಡಿಯ ಎಲ್ಲ ಲಾಭಗಳನ್ನು ನೀಡಲಾಗುವುದು. ಇದರಿಂದ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಪಿಂಚಣಿ ಖಾತ್ರಿ ಆಗುತ್ತದೆ. ಈ ಮಸೂದೆ ಸೌದಿಯ ಸಾರ್ವಜನಿಕ ಹೂಡಿಕೆ ನಿಧಿಗಳಿಗೆ ಕೆಲವು ನೇರ ತೆರಿಗೆ ಪ್ರಯೋಜನ ಒದಗಿಸುತ್ತದೆ. ಇದರಿಂದ ವಿದೇಶಿ ಹೂಡಿಕೆಗೆ ಉತ್ತೇಜನ ಸಿಗಲಿದೆ. 1961ರ ಆದಾಯ ತೆರಿಗೆ ಕಾಯ್ದೆ ಮತ್ತು 2025ರ ಹಣಕಾಸು ಕಾಯ್ದೆಯನ್ನು ತಿದ್ದುಪಡಿ ಮಾಡುವ ಗುರಿಯನ್ನು ಈ ಮಸೂದೆ ಹೊಂದಿದ್ದು, ತೆರಿಗೆದಾರರಿಗೆ ಸ್ಪಷ್ಟತೆ ಸಿಗುತ್ತದೆ.
ವರ್ಚುವಲ್ ಡಿಜಿಟಲ್ ಸ್ಪೇಸ್ನಲ್ಲಿ ಶೋಧ ಮತ್ತು ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದ ವಿವಾದಾತ್ಮಕ ನಿಬಂಧನೆಗಳಿಗೆ ಬದಲಾವಣೆಗಳೇನೂ ಮಾಡಿಲ್ಲ. ತೆರಿಗೆ ವಂಚನೆ ಶಂಕಿತರ ಆಸ್ತಿ, ಖಾತೆ ಪುಸ್ತಕ ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಈ ಮಸೂದೆ ಅನುಮತಿ ನೀಡುತ್ತದೆ. ತೆರಿಗೆದಾರರು ಸಹಕರಿಸದಿದ್ದರೆ ಇಮೇಲ್, ಸಾಮಾಜಿಕ ಮಾಧ್ಯಮಗಳಲ್ಲಿನ ಮಾಹಿತಿ ಪಡೆಯಲು ಪಾಸ್ವರ್ಡ್ಗಳನ್ನು ಬೈಪಾಸ್ ಮಾಡುವುದಕ್ಕೂ ಫೆಬ್ರವರಿ ಮಸೂದೆಯಲ್ಲಿ ಅನುಮತಿಸಲಾಗಿತ್ತು. ಹೊಸ ಮಸೂದೆಯಲ್ಲಿ ಡಿಜಿಟಲ್ ಸ್ಪೇಸ್ ಉಲ್ಲೇಖವಿಲ್ಲದಿದ್ದರೂ, ಕಂಪ್ಯೂಟರ್ ಸಿಸ್ಟೆಮ್ಳ ವ್ಯಾಖ್ಯಾನದಲ್ಲಿ ಇದನ್ನು ಸೇರಿಸಲಾಗಿದೆ. 2026ರ ಏಪ್ರಿಲ್ 1ರಿಂದ ಇದು ಜಾರಿಗೆ ಬಂದರೆ, ತೆರಿಗೆ ಅಧಿಕಾರಿಗಳು ಇಮೇಲ್, ಸಾಮಾಜಿಕ ಮಾಧ್ಯಮ, ಬ್ಯಾಂಕ್ ಖಾತೆಗಳು, ಟ್ರೇಡಿಂಗ್ ವೇದಿಕೆಗಳನ್ನು ಪ್ರವೇಶಿಸಬಹುದು. ಇದು ಗೌಪ್ಯತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ.