ಇಡೀ ದೇಶ ಗೆದ್ದ ಸಂಭ್ರಮದಲ್ಲಿ ಕಾಂಗ್ರೆಸ್

bhr vijyostava
ಬಾಳೆಹೊನ್ನೂರಿನ ಜೇಸಿ ವೃತ್ತದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಭಾಸ್ಕರ್ ವೆನಿಲ್ಲಾ, ಗೋವಿಂದೇಗೌಡ, ಟಿ.ಎಂ.ಉಮೇಶ್, ದೀಪಕ್ ಮರಿಗೌಡ, ಪ್ರಭಾಕರ್ ಇದ್ದರು.
Published on

ಬಾಳೆಹೊನ್ನೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೇಶದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಕಾಂಗ್ರೆಸ್ ಕೇವಲ 90 ಸ್ಥಾನವನ್ನು ಗೆದ್ದಿದ್ದರೂ ಇಡೀ ದೇಶಾದ್ಯಂತ ಎಲ್ಲ ಸ್ಥಾನಗಳನ್ನು ಗೆದ್ದ ಸಂಭ್ರಮ ಪಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಕಾಲೆಳೆದರು.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎನ್‌ಡಿಎ ಮೈತ್ರಿಕೂಟದ ಗೆಲುವಿನ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಜೇಸಿ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.
ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುತ್ತಿರುವುದು ದೇಶದ ಐತಿಹಾಸಿಕ ಘಟನೆಯಾಗಿದೆ. ನರೇಂದ್ರ ಮೋದಿ ಅವರನ್ನು ಸೋಲಿಸಲು ದೇಶದ ಹಲವು ವಿಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೂ ಅದು ಸಾಧ್ಯವಾಗಲಿಲ್ಲ. ವಿಪಕ್ಷಗಳ ಗ್ಯಾರಂಟಿ ಯೋಜನೆ ಹೇಳಿದ ಪರಿಣಾಮ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಕೆಲವು ಸೀಟುಗಳು ವ್ಯತ್ಯಾಸವಾಗಿವೆ. ಆದರೂ ಎನ್‌ಡಿಎಗೆ ಬಹುಮತ ಬಂದಿದ್ದು ಸರ್ಕಾರ ರಚನೆಗೆ ಜನಾದೇಶ ದೊರೆತಿದೆ. ಲೋಕಸಭಾ ಚುನಾವಣೆಯಲ್ಲಿ ಬಾಳೆಹೊನ್ನೂರು ಹೋಬಳಿಯಾದ್ಯಂತ ಬಿಜೆಪಿ ಪಕ್ಷವು ಕಾಂಗ್ರೆಸ್ಸಿಗಿಂತ ಹೆಚ್ಚು ಮತಗಳನ್ನು ಗಳಿಸಿದೆ. ಶಾಸಕ ರಾಜೇಗೌಡರ ತವರು ಕ್ಷೇತ್ರ ಬಾಸಾಪುರದಲ್ಲಿಯೂ ಬಿಜೆಪಿಗೆ ಲೀಡ್ ಬಂದಿದೆ ಎಂದರು.
ಬಾಳೆಹೊನ್ನೂರು -ಖಾಂಡ್ಯ ವಿಭಾಗ ಜೆಡಿಎಸ್ ಅಧ್ಯಕ್ಷ ಕೆ.ಟಿ.ಗೋವಿಂದೇಗೌಡ ಮಾತನಾಡಿ, ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ದೇಶದ ಅಧಿಕಾರದ ಗದ್ದುಗೆ ಏರುತ್ತಿರುವುದು ದೇಶದ ಸೌಭಾಗ್ಯವಾಗಿದೆ. ಮುಂದಿನ ದಿನಗಳಲ್ಲಿ ದೇಶಕ್ಕೆ ಇನ್ನಷ್ಟು ಒಳ್ಳೆಯ ದಿನಗಳು ಬರಲಿದ್ದು ದೇಶ ಅಭಿವೃದ್ಧಿ ಪಥದಲ್ಲಿ ನಡೆಯಲಿದೆ. ರಾಜ್ಯದಲ್ಲಿಯೂ ಮುಂದಿನ ದಿನಗಳಲ್ಲಿ ಜೆಡಿಎಸ್, ಬಿಜೆಪಿ ನಾಯಕರ ಸೂಚನೆಯಂತೆ ಬಲಿಷ್ಠವಾಗಿ ಮುನ್ನಡೆಯಲಿದೆ. ಎಲ್ಲ ಚುನಾವಣೆಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಉಮೇಶ್ ಮಾತನಾಡಿ, ದೇಶಕ್ಕೆ ಮೋದಿ ಬೇಕು ಎಂಬ ಜನರ ಆಶಯದೊಂದಿಗೆ ಈ ಚುನಾವಣೆಯಲ್ಲಿ ಪುನಃ ಎನ್‌ಡಿಎಗೆ ಅಧಿಕಾರ ಲಭಿಸಿದೆ. ಕೆಲವು ಸೀಟುಗಳ ವ್ಯತ್ಯಾಸವಾಗಿದ್ದರೂ ಮೈತ್ರಿಕೂಟ ಬಲವಾಗಿದೆ. ಗ್ಯಾರಂಟಿಯ ಭ್ರಮೆಯಲ್ಲಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ವಿಲವಾಗಿದೆ. ಬಿಜೆಪಿಯ ಆಡಳಿತಕ್ಕೆ ಜನ ಒತ್ತು ನೀಡಿದ್ದಾರೆ ಎಂದರು.
ಹೋಬಳಿ ಜೆಡಿಎಸ್ ಅಧ್ಯಕ್ಷ ದೀಪಕ್ ಮರಿಗೌಡ, ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪ್ರಣಸ್ವಿ, ಮುಖಂಡರಾದ ಸಂತೋಷ್ ಅರೆನೂರು, ಪ್ರದೀಪ್ ಕಿಚ್ಚಬ್ಬಿ, ಮಂಜು ಹೊಳೆಬಾಗಿಲು, ಎಸ್.ಮಂಜು, ಬಿ.ಜಗದೀಶ್ಚಂದ್ರ, ಸುಧಾ ಪೈ, ಮಧುರಾ, ಉಮಾ, ಎನ್.ಕೆ.ಉದಯ್, ರಾಜಪ್ಪಗೌಡ, ಮಹೇಶ್, ಮದನ್ ಹುಣಸೇಹಳ್ಳಿ, ಪ್ರತಿಮಾ ಮತ್ತಿತರರಿದ್ದರು.
ಸಭೆಗೂ ಮುನ್ನ ಪಟ್ಟಣದ ಮಾರ್ಕಾಂಡೇಶ್ವರ ದೇವಾಲಯದ ಮುಂಭಾಗದಿಂದ ಹೊರಟ ವಿಜಯೋತ್ಸವ ಮೆರವಣಿಗೆ ಪಟ್ಟಣದ ವಿವಿಧೆಡೆ ಸಂಚರಿಸಿತು. ಜೇಸಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net