ಬಸವರಾಜ ಬೊಮ್ಮಾಯಿಯವರ ಗೆಲುವು ನಿಶ್ಚಿತ; ಪರಮೇಶಪ್ಪ ಗೂಳಣ್ಣನವರ

je721538035802367-abc
Published on


ರಾಣೆಬೆನ್ನೂರ: ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರ ಹೆಸರು ಘೋಷಣೆಯಾದಾಗಿನಿಂದ ಶ್ರಮವಹಿಸಿ ಕಾರ್ಯನಿರ್ವಹಿಸಿದ್ದು ಬೊಮ್ಮಾಯಿ ಅವರು ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ ಹೇಳಿದರು.
ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ-ಗದಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ನಾಲ್ಕು ಬಾರಿ ಗೆಲುವು ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬೇರು ಮಟ್ಟದಲ್ಲಿ ಪ್ರತಿಯೊಬ್ಬ ಮತದಾರರನ್ನು ತಲುಪುವ ಕೆಲಸ ಮಾಡಲಾಗಿದೆ.
ಎಸ್‌ಸಿ, ಎಸ್‌ಟಿ ಸಮುದಾಯದ ಜನರು ಸ್ವಯಂಪ್ರೇರಿತವಾಗಿ ಪಕ್ಷದ ಕೆಲಸ ಹಾಗೂ ಸಿಎಂ ಕೆಲಸದ ಬಗ್ಗೆ ತಿಳಿಸಿ ಬೊಮ್ಮಾಯಿಯವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಶಕ್ತಿ ಕೇಂದ್ರದ ಏಳು ಮೋರ್ಚಾಗಳು ಪದಾಧಿಕಾರಿಗಳು ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ.
ಮೇ 7ರಂದು ಮತದಾನದ ದಿನ ಬೆಳಗ್ಗೆ 7ಗಂಟೆಯಿಂದ ಪ್ರತಿಯೊಬ್ಬ ಮತದಾರರನ್ನು ಮತ ಗಟ್ಟೆಗೆ ಕರೆ ತಂದು ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು. ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಮಾಡಿದ ಒಳ್ಳೆಯ ಕಾರ್ಯಗಳು, ರೈತರಿಗೆ ಅನೇಕ ಯೋಜನೆಗಳು ಜಾರಿಗೆ ತಂದಿದೆ. ಅನೇಕ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕಡಿತಗೊಳಿಸಿದೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಹರ ಘಟಕದ ಅಧ್ಯಕ್ಷ ರಮೇಶ ಗುತ್ತಲ, ಭಾರತಿ ಜಂಬಗಿ, ಎ.ಬಿ. ಪಾಟೀಲ, ಪರಮೇಶ ಗವಳಿ, ದೀಪಕ ಹರಪನಹಳ್ಳಿ, ಜಿ.ಜಿ. ಹೊಟ್ಟಿಗೌಡ್ರ, ಪ್ರಕಾಶ ಪೂಜಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net