

ಬೆಂಗಳೂರು: ಹೈಕೋರ್ಟ್ ಆದೇಶದ ಮೇರೆಗೆ ಬಹುತೇಕ ಸಬ್‌ರಿಜಿಸ್ಟ್ರಾರ್‌ಗಳು ಹಿಂದಿನ ಉಪ ನೋಂದಣಿ ಕಚೇರಿಯಲ್ಲಿ ಬುಧವಾರ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಲಾಗಿನ್ ಐಡಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
90 ಅಧಿಕಾರಿಗಳ ವರ್ಗಾವಣೆ ಆದೇಶ ಪ್ರಶ್ನಿಸಿ ಸಬ್‌ರಿಜಿಸ್ಟ್ರಾರ್‌ಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕೌನ್ಸೆಲಿಂಗ್ ವರ್ಗಾವಣೆ ಪ್ರಶ್ನಿಸಿರುವ ಅಧಿಕಾರಿಗಳಿಗೆ ಈ ಹಿಂದಿನ ಕಚೇರಿಯಲ್ಲಿ ಲಾಗಿನ್ ಐಡಿ ಸೌಲಭ್ಯ ಕೊಟ್ಟು ಎಂದಿನಂತೆ ಕರ್ತವ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಜ.7ಕ್ಕೆ ಅರ್ಜಿಯ ವಿಚಾರಣೆ ಮುಂದೂಡಿತ್ತು.
ಈ ಆದೇಶದಂತೆ ಅರ್ಜಿದಾರ ಸಬ್‌ರಿಜಿಸ್ಟ್ರಾರ್‌ಗಳು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೆ ಲಿಖಿತ ಪತ್ರ ಬರೆದು ಲಾಗಿನ್ ಐಡಿ ನೀಡುವಂತೆ ಮನವಿ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಇಡೀ ದಿನ ಲಾಗಿನ್ ಐಡಿ ನೀಡದೆ ಇರುವುದು ಹೈಕೋರ್ಟ್ ಆದೇಶ ಉಲ್ಲಂಸಿದಂತೆ ಆಗುತ್ತಿದೆ ಎನ್ನಲಾಗುತ್ತಿದೆ.
ಕೌನ್ಸೆಲಿಂಗ್ ವರ್ಗಾವಣೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಡಿ.16ರಂದು ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ವರ್ಗಾವಣೆ ಆದೇಶದಂತೆ ಹೊಸ ಕಚೇರಿಗೆ ವರದಿ ಮಾಡಿಕೊಂಡಿರುವ 32 ಅಧಿಕಾರಿಗಳಿಗೆ ಮಧ್ಯಂತರ ಆದೇಶದಿಂದ ಯಾವುದೇ ಪರಿಹಾರ ಇಲ್ಲ. ಔಪಚಾರಿಕವಾಗಿ ಕಚೇರಿಯಿಂದ ಬಿಡುಗಡೆಯಾದ 24 ಅಧಿಕಾರಿಗಳು ಹೊಸ ಕಚೇರಿಗೆ ಹೋಗಬೇಕಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು.
ಈ ಬಗ್ಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರಿಂದ ಅಭಿಪ್ರಾಯ ಪಡೆದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಡಿ.21, 22ರಂದು ಚಲನಾದೇಶ ಹೊರಡಿಸಿತ್ತು. ಕೆಲವರನ್ನು ವರ್ಗಾವಣೆ ಆದೇಶದಂತೆ ಹೊಸ ಕಚೇರಿಗೆ ಹೋಗುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಡಿ.30ರಂದು ಹೈಕೋರ್ಟ್ ಮೊರೆ ಹೋಗಿದ್ದರು.