ದೆಹಲಿ ವಿಮಾನ ನಿಲ್ದಾಣಕ್ಕೆ ಮಿಡತೆಗಳ ಹಾವಳಿ, ವಿಮಾನ ಸಂಚಾರಕ್ಕೆ ಅಡಚಣೆ

locust
Published on

ನವದೆಹಲಿ: ಕೆಲದಿನಗಳಿಂದ ಬಿಡುವು ನೀಡಿದ್ದ ಮಿಡತೆಗಳು ಇದೀಗ ಉತ್ತರ ಭಾರತದಲ್ಲಿ ಮತ್ತೆ ದಾಳಿ ಇಡಲಾರಂಭಿಸಿವೆ. ಶನಿವಾರ ಮಧ್ಯಾಹ್ನದ ವೇಳೆಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಂಡು ದಂಡಾಗಿ ಬಂದು ಹಾರಾಟ ನಡೆಸಿದವು. ಇದರಿಂದಾಗಿ ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಸದ್ಯ ಪರಿಸ್ಥಿತಿಯನ್ನು ಅವಲೋಕಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಸಮಿತಿಯೊಂದನ್ನು ರಚಿಸಿದ್ದಾರೆ. ಅಲ್ಲದೆ, ವಿಮಾನ ಹಾರಾಟ ಆರಂಭಿಸುವಾಗ ಮತ್ತು ಇಳಿಸುವಾಗ ಎಚ್ಚರದಿಂದ ಇರುವಂತೆ ಪೈಲಟ್​ಗಳಿಗೆ ಸೂಚನೆ ನೀಡಿದ್ದಾರೆ.

ಅನ್​ಲಾಕ್​ 1.0 ಜಾರಿಗೆ ಬಂದ ನಂತರದಲ್ಲಿ ದೇಶಿಯ ವಿಮಾನ ಸಂಚಾರ ಪುನರಾರಂಭಗೊಂಡಿದೆ. ದೆಹಲಿಯ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಪ್ರತಿದಿನ 500ಕ್ಕೂ ವಿಮಾನಗಳು ಸಂಚರಿಸುತ್ತವೆ. ಸದ್ಯಕ್ಕೆ ಯಾವುದೇ ವಿಮಾನದ ಹಾರಾಟಕ್ಕೆ ತೊಂದರೆಯಾಗಿಲ್ಲ. ಎಲ್ಲ ವಿಮಾನಗಳು ಸರಿಯಾದ ಸಮಯಕ್ಕೆ ಸಂಚರಿಸುತ್ತವೆ. ಆದರೂ ಎಚ್ಚರಿಕೆಯಿಂದ ಇರುವಂತೆ ಪೈಲಟ್​ಗಳಿಗೆ ಸೂಚನೆ ನೀಡಲಾಗುತ್ತಿದೆ ಎಂದು ಎಟಿಸಿ ಸಿಬ್ಬಂದಿ ಹೇಳಿದ್ದಾರೆ.

ನೆರೆಯ ಪಾಕಿಸ್ತಾನದಿಂದ ರಾಜಸ್ಥಾನ ಮಾರ್ಗವಾಗಿ ಭಾರತವನ್ನು ಪ್ರವೇಶಿಸಿರುವ ಮಿಡತೆಗಳ ಹಿಂಡು ರಾಜಸ್ಥಾನ, ಪಂಜಾಬ್​, ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ಕಟಾವ್​ಗೆ ಬಂದಿದ್ದ ಬೆಳೆಗಳನ್ನು ಭಕ್ಷಿಸಿ, ರೈತರಿಗೆ ತೀವ್ರ ನಷ್ಟ ಉಂಟು ಮಾಡಿವೆ. ಆದರೆ, ಕೆಲವು ದಿನಗಳಿಂದ ಬಿಡುವು ನೀಡಿದ್ದ ಇವು ಇದೀಗ ದೆಹಲಿ ಮತ್ತು ಗುರುಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಹಾವಳಿ ಇಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net