

ಬೆಂಗಳೂರು: ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜುಲೈ 22ರವರೆಗೆ ರಾಜಧಾನಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿಧಿಸಿರುವ ಲಾಕ್ಡೌನ್ ಬಿಗಿ ಇಲ್ಲದಂತಾಗಿತ್ತು. ಬುಧವಾರ ಮೊದಲ ದಿನ ಬೆಳಗ್ಗೆಯಿಂದಲೇ ಎಂದಿನಂತೆ ಜನರು ಓಡಾಟ ನಡೆಸುತ್ತಿದ್ದರು. ದಿನಸಿ, ಹಾಲು, ತರಕಾರಿ ಇನ್ನಿತರ ತುರ್ತು ಸೇವೆಗಳ ನೆಪ ಮಾಡಿಕೊಂಡು ಸಾರ್ವಜನಿಕರು ರಸ್ತೆಗೆ ಇಳಿದಿದ್ದರು. ಇನ್ನೂ ಕೇಂದ್ರ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರದ ತುರ್ತು ಸೇವೆಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿ- ಸಿಬ್ಬಂದಿ ಸಹ ಕಚೇರಿ ಕಡೆಗೆ ಮುಖ ಮಾಡಿದ್ದರಿಂದ ವಾಹನ ಸಂಚಾರ ಎಂದಿನಂತೆ ಇತ್ತು. ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಲು ಪೊಲೀಸರ ಕೊರತೆ ಗೋಚರಿಸುತ್ತಿತ್ತು. ಇದರ ನಡುವೆಯೂ ಪ್ರಮುಖ ರಸ್ತೆಗಳಲ್ಲಿ ಒನ್ವೇ ಮಾಡಿ ಚೆಕ್ಪೋಸ್ಟ್ ನಿರ್ಮಾಣ ಮಾಡಿಕೊಂಡು ಬಹುತೇಕ ವಾಹನಗಳನ್ನು ತಪಾಸಣೆ ನಡೆಸಿ ಕಳುಹಿಸುತ್ತಿದ್ದರು.
ಧಾರವಾಡ ಜಿಲ್ಲೆಯಲ್ಲಿ 10 ದಿನಗಳ ಲಾಕ್ಡೌನ್ನ ಮೊದಲ ದಿನವಾದ ಬುಧವಾರ ಕಟ್ಟುನಿಟ್ಟಿನಿಂದ ಅನುಷ್ಠಾನಗೊಂಡಿತು. ಸಾರ್ವಜನಿಕರು ಅಗತ್ಯ ಸಾಮಗ್ರಿಗಳನ್ನು ಖರೀದಿಸು ವುದಕ್ಕಾಗಿ ಮಧ್ಯಾಹ್ನ 12 ಗಂಟೆವರೆಗೆ ವಿನಾಯಿತಿ ನೀಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಒಂದು ವಾರ ಲಾಕ್ಡೌನ್ ಜಾರಿಯಾಗಿದ್ದು, ಈ ಅವಧಿಯಲ್ಲಿ ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಜಿಲ್ಲಾ ಗಡಿಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಸರಕು ಸಾಗಣೆ ಮತ್ತು ವೈದ್ಯಕೀಯ ಸಹಿತ ತುರ್ತು ಅಗತ್ಯಗಳಿಗೆ ಮಾತ್ರ ಗಡಿಯಿಂದ ಸಾಗಲು ಅವಕಾಶವಿದೆ. ರಾಯಚೂರು, ಬೀದರ್, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲೂ ಲಾಕ್ಡೌನ್ ಘೋಷಣೆಯಾಗಿದೆ.
ಇಂದಿನಿಂದ ಶಿವಮೊಗ್ಗ ಲಾಕ್
ಶಿವಮೊಗ್ಗದಲ್ಲಿ ಜು.16ರಿಂದ ಭಾಗಶಃ ಲಾಕ್ಡೌನ್ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ಲಾಸ್ಮಾ ದಾನಕ್ಕೆ -ಠಿ;5000 ಪ್ರೋತ್ಸಾಹಧನ
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 597 ಜನ ಐಸಿಯುನಲ್ಲಿದ್ದು, ಅಂತಹವರ ಚಿಕಿತ್ಸೆಗೆ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಬೇಕು. ಪ್ಲಾಸ್ಮಾ ದಾನ ಮಾಡುವವರಿಗೆ ಸರ್ಕಾರದಿಂದ 5000 ರೂ. ಪೋ›ತ್ಸಾಹಧನ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಕರೊನಾ ಪರೀಕ್ಷೆ 9 ಲಕ್ಷ ಪೂರ್ಣಗೊಂಡಿದ್ದು, ಬುಧವಾರ ಒಂದೇದಿನ 22,204 ಪರೀಕ್ಷೆ ನಡೆಸಲಾಗಿದೆ. ಕರೊನಾ ಟೆಸ್ಟ್ ಮಾಡದ ಖಾಸಗಿ ಆಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
1,645 ಎಫ್ಐಆರ್
ರಾಜ್ಯದಲ್ಲಿ ಈವರೆಗೂ 69,427ಮಂದಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದು, ಅವರಲ್ಲಿ 1,645 ಮಂದಿ ವಿರುದ್ಧ ನಾನಾ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಜು.1ರವರೆಗಿನ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ 35,082, ಬೆಳಗಾವಿಯಲ್ಲಿ 3,390, ತುಮಕೂರಿನಲ್ಲಿ 2,158, ದಕ್ಷಿಣ ಕನ್ನಡ 2,156, ಮೈಸೂರು 1,980 ಸೇರಿ 69,427 ಮಂದಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದು, ಪದೇಪದೆ ನಿಯಮಗಳನ್ನು ಗಾಳಿಗೆ ತೂರಿದ 2,205 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಒಟ್ಟು 2,25,908 ಮಂದಿಗೆ ಎಚ್ಚರಿಕೆ ನೀಡಿ, ನಿಗದಿತ ಅವಧಿಯವರೆಗೆ ಮನೆಯಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಕಾನೂನು ಕ್ರಮ:ಮನೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ಮೇಲೆ ಸಾಂಕ್ರಾಮಿಕ ರೋಗಗಳ ಕಾಯಿದೆಯಡಿ ಕಾನೂನು ಕ್ರಮವನ್ನು ಕೈಗೊಳ್ಳಲು ಅವಕಾಶವಿದ್ದು, ಬೆಂಗಳೂರು ನಗರದಲ್ಲಿ 570, ಬೆಳಗಾವಿಯಲ್ಲಿ 124, ಕಲಬುರಗಿ 106, ಬೆಂಗಳೂರು ಗ್ರಾಮಾಂತರ 104 ಮಂದಿ ಸೇರಿ ರಾಜ್ಯಾದ್ಯಂತ 1645 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮನೆ ಕ್ವಾರಂಟೈನ್ಗೆ ಒಳಗಾದವರ ಕೈಗಳಿಗೆ ಮುದ್ರೆಗಳನ್ನು ಹಾಕಲಾಗುತ್ತದೆ. ಅದೇ ರೀತಿ ಮನೆ ಹೊರಗೆ ಗೋಡೆಯ ಮೇಲೆ ಭಿತ್ತಿ ಪತ್ರ ಅಂಟಿಸಲಾಗುತ್ತದೆ. ಅವರ ಚಲನವಲನದ ಮೇಲೆ ಅಕ್ಕಪಕ್ಕದ ನಿವಾಸಿಗಳು ನಿಗಾ ಇಡಬೇಕು. ಒಂದು ವೇಳೆ ಅವರು ಮನೆಯಿಂದ ಹೊರಗಡೆ ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.