

ನವದೆಹಲಿ: ಇದೀಗ ಏಪ್ರಿಲ್ 14ರವರೆಗೆ ದೇಶಾದ್ಯಂತ ಜಾರಿಗೊಳಿಸಲಾಗಿರುವ ಕೋವಿಡ್ 19 ಲಾಕ್ಡೌನ್ 14ರ ನಂತರವೂ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ದೇಶದ ಯಾವುದೇ ಭಾಗದಲ್ಲಿ ಒಂದೇ ಒಂದು ಸೋಂಕಿನ ಪ್ರಕರಣ ವರದಿಯಾಗದಿದ್ದರೆ ಮಾತ್ರ ಹಂತಹಂತವಾಗಿ ಲಾಕ್ಡೌನ್ ಅನ್ನು ಸಡಿಲಗೊಳಿಸುವ ಬಗ್ಗೆ ಕೇಂದ್ರ ಸಚಿವ ಸಂಪುಟ ಸಭೆ ಒಲವು ತೋರಿದೆ.
ಸೋಮವಾರದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಸಚಿವ ಪ್ರಕಾಶ್ ಜಾವ್ಡೇಕರ್, ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಲಾಕ್ಡೌನ್ ಅನ್ನು ಮುಂದುವರಿಸುವ ಅಥವಾ ಅಂತ್ಯಗೊಳಿಸವ ಬಗ್ಗೆ ಸಕಾಲದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಸ್ತುತ ದೇಶದಲ್ಲಿನ ಪರಿಸ್ಥಿತಿಯನ್ನು ಅನುಕ್ಷಣ ಗಮನಿಸಲಾಗುತ್ತಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
14ರ ನಂತರವೂ ಮುಂದುವರಿಸಲು ಆಗ್ರಹ: ರಾಷ್ಟ್ರದಲ್ಲಿ ಲಾಕ್ಡೌನ್ ಮುಂದುವರಿಸುವ ಬಗ್ಗೆ ಕೇಂದ್ರ ಸರ್ಕಾರ ಗೊಂದಲದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಲಾಕ್ಡೌನ್ ಅನ್ನು 14ರ ನಂತರವೂ ಮುಂದುವರಿಸಬೇಕು ಎಂದು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಆಗ್ರಹಿಸಿದ್ದಾರೆ.
ಮೊದಲಿಗೆ ನಾವು ಜೀವಗಳನ್ನು ಉಳಿಸಬೇಕು. ಆನಂತರ ಬೇಕಾದರೆ ಆರ್ಥಿಕತೆಯನ್ನು ಪುನರುತ್ಥಾನಗೊಳಿಸಬಹುದು ಎಂದು ಹೇಳಿದ್ದಾರೆ.