

ಬಲಂಪುರ (ಉತ್ತರ ಪ್ರದೇಶ): 24 ವರ್ಷದ ಲುಧಿಯಾನದ ಯುವಕ ಸೋನು ಕುಮಾರ್ ಚೌಹಾಣ್‌ಗೆ ನೇಪಾಳ ಗಡಿಯ ಯುವತಿ ಜತೆ ಮದುವೆ ಫಿಕ್ಸ್ ಆಗಿತ್ತು. ಮುಹೂರ್ತನೂ ಗೊತ್ತಾಗಿತ್ತು.
ಏಪ್ರಿಲ್ 14 ಲಾಕ್‌ಡೌನ್ ಮುಗಿಯತ್ತೆ ಎಂದು ಈ ಜೋಡಿ ಖುಷಿ ಪಟ್ಟಿದ್ದೇ ಪಟ್ಟಿದ್ದು. ಅಬ್ಬಾ! ಏಪ್ರಿಲ್ 12 ಬಂತು. ಇನ್ನೇನು ಮದುವೆಗೆ ಕೆಲವೇ ದಿನ ಎಂದು ಮದುಮಕ್ಕಳಿಬ್ಬರೂ ಲೆಕ್ಕಾಚಾರ ಹಾಕಿದ್ದೇ ಹಾಕಿದ್ದು. ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ‘ಲಾಕ್‌ಡೌನ್ ಮೇ 3 ರವರೆಗೆ ಮುಂದೂಡಲಾಗಿದೆ’ ಎಂದು ಪ್ರಧಾನಿ ಅವರಿಂದ ಘೋಷಣೆ ಮೊಳಗಿದ್ದೇ ತಡ, ಬಹುತೇಕ ವಿವಾಹ ಆಕಾಂಕ್ಷಿಗಳಂತೆಯೇ ಈ ಜೋಡಿಯ ಸಂಭ್ರಮವೂ ಠುಸ್ ಎಂದು ಬಿಟ್ಟಿತು.
ಲಾಕ್‌ಡೌನ್ ಅವಧಿ ವಿಸ್ತರಣೆ ಆಗುತ್ತಿದ್ದಂತೆಯೇ ಎಲ್ಲರೂ ಮದುವೆಯನ್ನು ಪೋಸ್ಟ್‌ಪೋನ್ ಮಾಡುವ ಲೆಕ್ಕಾಚಾರದಲ್ಲಿ ತೊಡಗಿದ್ದರೆ ಸೋನು ಮಾತ್ರ ಇದೇ ಮುಹೂರ್ತದಲ್ಲಿ ಮದುವೆ ಆಗಲೇಬೇಕೆಂದು ನಿರ್ಧಾರ ಮಾಡಿದ. ಅದಕ್ಕೆ ಹುಡುಗಿಯ ಮನೆಯವರೂ ಒಪ್ಪಿದರು. ಲಾಕ್‌ಡೌನ್ ನಿಯಮದಂತೆ ಹೆಚ್ಚು ಜನರು ಸೇರದೇ ಸಿಂಪಲ್ ಆಗಿ ಮದುವೆಯಾಗುವ ಬಗ್ಗೆ ಮಾತುಕತೆಯೂ ನಡೆಯಿತು.
ಎಲ್ಲವೂ ಸರಿ. ಆದರೆ ವಾಹನ? ವಾಹನ ಓಡಾಟಕ್ಕೆ ನಿರ್ಬಂಧ ಇದೆಯಲ್ಲ! ಅದು ಒಂದಲ್ಲ, ಎರಡಲ್ಲ… ಬರೋಬ್ಬರಿ 850 ಕಿ.ಮೀ ದೂರ ಹೋಗಲು ಪೊಲೀಸರು ಅನುಮತಿಯಂತೂ ನೀಡುವುದು ಸಾಧ್ಯವೇ ಇರಲಿಲ್ಲ. ಹಾಗೆಂದು ಮದುವೆಯ ಕನಸು ಕಾಣುತ್ತಿದ್ದ ಸೋನು ಅಷ್ಟು ಸುಲಭದಲ್ಲಿ ಸೋಲು ಒಪ್ಪಿಕೊಳ್ಳಲು ತಯಾರು ಇರಲಿಲ್ಲ.
ತನ್ನ ಮೂವರು ಸ್ನೇಹಿತರ ಜತೆಗೂಡಿ ಚರ್ಚಿಸಿ, ಉಪಾಯ ಕಂಡುಕೊಂಡೇ ಬಿಟ್ಟ. ಅದೂ ಏನಂತೀರಾ? ಸೈಕಲ್ ಮೇಲೆ ಹೋಗುವುದು. 850 ಕಿ.ಮೀ. ದೂರ ಸೈಕಲ್‌ನಲ್ಲಾ ಎಂದು ಎಲ್ಲರೂ ಹುಬ್ಬೇರಿಸಲಿಕ್ಕೆ ಸಾಕು. ಆದರೆ ಈ ವರನಿಗೆ ಅದು ದೊಡ್ಡ ವಿಷಯ ಎನ್ನಿಸಲೇ ಇಲ್ಲ. ಅವನ ಪರಮಾಪ್ತ ಮಿತ್ರರಿಬ್ಬರೂ ಸ್ನೇಹಿತನ ಮದುವೆಗೆ ಸಾಕ್ಷಿಯಾಗಲು ಹೋಗುವ ಯೋಚನೆ ಮಾಡಿದರು.
ಒಂದು ವಾರ ನಾಲ್ವರೂ ಸೈಕಲ್ ಹೊಡೆದದ್ದೇ ಹೊಡೆದದ್ದು. ಅಂತೂ 850 ಕಿ,ಮೀ ತಲುಪುತ್ತಿರುವಾಗಲೇ ಪೊಲೀಸರ ಕೈಗೆ ಸಿಕ್ಕಿಕೊಂಡು ಬಿಟ್ಟರು! ಎಲ್ಲೆಲ್ಲೋ ಸುತ್ತಾಡಿ ಬಂದವರನ್ನು ಪೊಲೀಸರು ಬಿಟ್ಟಾರೆಯೇ? ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇಟ್ಟಿದ್ದಾರೆ!
‘ನನ್ನ ಮದುವೆಯ ಬಗ್ಗೆ ಪೊಲೀಸರಿಗೆ ಎಲ್ಲಾ ವಿಷಯ ತಿಳಿಸಿದೆ. ಆದರೂ ಅವರು ನನ್ನ ಮಾತು ಕೇಳಿದೆ ಕ್ವಾರಂಟೈನ್‌ನಲ್ಲಿ ಇಟ್ಟರು. ನನಗೆ ಜತೆ ನನ್ನ ಮಿತ್ರರೂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ’ ಎಂದು ಮಾಧ್ಯಮಗಳ ಮುಂದೆ ಮದುಮಗ ಕಣ್ಣೀರಿಟ್ಟ. ಆದರೆ ಕೂಡಲೇ ‘ಮದುವೆ ಆಮೇಲೆ ಆಗಬಹುದು, ಮೊದಲು ಆರೋಗ್ಯ ಮುಖ್ಯ’ ಎಂದೂ ಅಲ್ಲೇ ಇರುವ ಪೊಲೀಸರ ಎದುರು ಹೇಳಿಕೆಯನ್ನೂ ಕೊಟ್ಟ!
ಅಂತೂ ಈ ಮದುಮಗ ಹಾಗೂ ಮಿತ್ರರು 14 ದಿನ ಆರೋಗ್ಯವಂತರಾಗಿ ಇದ್ದರೆ, ಗಟ್ಟಿಮೇಳ ಮೊಳಗಲಿದೆ. (ಏಜೆನ್ಸೀಸ್)