ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಕಂಡು ಈ ವ್ಯಕ್ತಿ ಮಾಡಿದ್ದೇನು? ಲಾಕ್‌ಡೌನ್‌ ಭೀಕರತೆ ತೋರಿಸುವ ದೃಶ್ಯ ವೈರಲ್‌

milk
Published on

ನವದೆಹಲಿ: ಈಗ ಎಲ್ಲೆಲ್ಲೂ ಲಾಕ್‌ಡೌನ್‌. ಈ ಲಾಕ್‌ಡೌನ್‌ ಬಹುತೇಕರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವುದು ನಿಜವಾದರೂ ಬಡವರ ಪಾಲಿಗೆ ಇದು ಅಕ್ಷರಶಃ ನರಕವನ್ನೇ ತೋರಿಸಿದೆ. ಜತೆಗೆ, ಹೋಟೆಲ್‌, ರೆಸ್ಟೋರೆಂಟ್‌ಗಳೆಲ್ಲವೂ ಬಂದಾಗಿರುವ ಕಾರಣ ಹಾಗೂ ಜನರೂ ಹೊರಗಡೆ ಓಡಾಡದ ಹಿನ್ನೆಲೆಯಲ್ಲಿ ಆಹಾರ ಸಿಗದೇ ಪ್ರಾಣಿ, ಪಕ್ಷಿಗಳ ಪಾಡೂ ಹೇಳತೀರದಾಗಿದೆ.

ಲಾಕ್‌ಡೌನ ಭೀಕರತೆ ಬಡಜನರು ಹಾಗೂ ಪ್ರಾಣಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎನ್ನುವುದನ್ನು ತೋರಿಸುವ ಘಟನೆಯೊಂದು ಆಗ್ರಾದ ರಾಂಬಾಗ್ ಬಳಿಯ ಚೌರಾಹದಲ್ಲಿ ನಡೆದಿದ್ದು, ಅದರ ವೀಡಿಯೋ ಮನಕಲಕುವಂತಿದೆ. ರಸ್ತೆಯಲ್ಲಿ ಚೆಲ್ಲಿದ್ದ ಹಾಲನ್ನು ಒಬ್ಬ ವ್ಯಕ್ತಿ ತಾನು ತಂದಿರುವ ಮಣ್ಣಿನ ಪಾತ್ರೆಯಲ್ಲಿ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅಲ್ಲಿರುವ ನಾಯಿಗಳು ಅದನ್ನು ಕುಡಿಯುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜ್‌ಮಹಲ್‌ದಿಂದ ಸುಮಾರು ಆರು ಕಿಲೋ ಮೀಟರ್‌ ದೂರದಲ್ಲಿದೆ ಚೌರಾಹ. ಈ ಗ್ರಾಮಕ್ಕೆ ಬೆಳಗ್ಗೆ ಹಾಲು ಪೂರೈಕೆ ಮಾಡಲು ಬಂದಿದ್ದ ವ್ಯಕ್ತಿಯೊಬ್ಬನ ಬೈಕು ಅಪಘಾತಕ್ಕೆ ಒಳಗಾಗಿತ್ತು. ಆದ್ದರಿಂದ ಹಾಲಿನ ಪಾತ್ರೆ ರಸ್ತೆಯ ಮೇಲೆ ಬಿದ್ದು ರಸ್ತೆ ತುಂಬ ಹಾಲು ಚೆಲ್ಲಿದೆ. ಹಸಿವಿನಿಂದ ಕಂಗೆಟ್ಟಿದ ಕೆಲವು ನಾಯಿಗಳು ಕುಡಲೇ ಚೆಲ್ಲಿದ ಹಾಲನ್ನು ಕುಡಿಯಲು ಪ್ರಾರಂಭಿಸಿದರೆ, ಅಲ್ಲಿಯೇ ಹಸಿವಿನಿಂದ ಇದ್ದ ವ್ಯಕ್ತಿಯೂ ಅದೇ ವೇಗದಲ್ಲಿ ಬಂದು ಹಾಲನ್ನು ತುಂಬಿಸಿಕೊಳ್ಳುತ್ತಿದ್ದ. ಅಲ್ಲಿಯೇ ಹಾದು ಹೋಗುತ್ತಿದ್ದ ಕೆಲವರು ಈ ವೀಡಿಯೋವನ್ನು ಚಿತ್ರೀಕರಿಸಿದ್ದಾರೆ.

ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಕೆಲವು ಮಾಧ್ಯಮಗಳು ಸ್ಥಳೀಯ ಅಧಿಕಾರಿಗಳ ಪ್ರತಿಕ್ರಿಯೆ ಕೇಳಿದಾಗ, ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. (ಏಜನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net