

ನವದೆಹಲಿ: ಕರೊನಾ ಮಹಾಮಾರಿ ವಿಶ್ವವನ್ನೇ ಆವರಿಸಲಾರಂಭಿಸುತ್ತಲೇ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿದರು. ದೇಶದಲ್ಲಿ ಸೋಂಕು ಹರಡುವಿಕೆಯನ್ನು ಸಮರ್ಪಕವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇದು ಸಾಮಾಜಿಕ ರೋಗನಿರೋಧಕ ಚುಚ್ಚುಮದ್ದಿನಂತೆ ಕೆಲಸ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಲಾಕ್ಡೌನ್ಗೂ ಮುನ್ನ ದೇಶದಲ್ಲಿ 3.4 ದಿನಗಳಿಗೆ ಕರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಇದೀಗ ಲಾಕ್ಡೌನ್ ಘೋಷಿಸಿದ ನಂತರದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವಿಕೆ 13 ದಿನಗಳಿಗೆ ವಿಸ್ತರಿಸಿದೆ ಎಂದು ಹೇಳಿದರು.
ಭಾರತದಲ್ಲಿ ಸರಿಯಾದ ಸಮಯದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಯಿತು. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡಿದವು. ಪರಿಸ್ಥಿತಿ ಕೈಮೀರಿದ ಬಳಿಕ ತಮ್ಮ ದೇಶದಲ್ಲಿ ಲಾಕ್ಡೌನ್ ಘೋಷಿಸಿದವು. ಕೆಲವು ರಾಷ್ಟ್ರಗಳಲ್ಲಿ ಅರೆಬರೆಯಾಗಿ ಲಾಕ್ಡೌನ್ ಅನುಷ್ಠಾನಗೊಳಿಸಲಾಯಿತು. ಆ ರಾಷ್ಟ್ರಗಳು ಇದಕ್ಕೆ ತಕ್ಕ ಬೆಲೆ ತೆತ್ತವು ಎಂದು ತಿಳಿಸಿದರು.