

ಕರೊನಾ ವೈರಸ್ ಹರಡುವುದನ್ನು ತಡೆಯಲು ವಿಧಿಸಲಾಗಿರುವ ಲಾಕ್ಡೌನ್ ಪರಿಣಾಮ ದೇವಾಲಯಗಳ ಮೇಲೂ ಉಂಟಾಗಿದೆ. 50ಕ್ಕೂ ಹೆಚ್ಚು ದಿನದಿಂದ ದೇಶದಾದ್ಯಂತ ಪ್ರಮುಖ ದೇವಸ್ಥಾನಗಳ ಬಾಗಿಲು ಮುಚ್ಚಿರುವುದರಿಂದ ಅವುಗಳ ಆದಾಯದ ಮೇಲೆ ಭಾರಿ ಹೊಡೆತ ಬಿದ್ದಿದೆ. ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆಯೆಂದರೆ ಕೆಲವು ದೇವಾಲಯಗಳ ಆಡಳಿತ ಮಂಡಳಿಗಳು ದೈನಿಕ ವೆಚ್ಚ ಭರಿಸಲೂ ಪರದಾಟ ನಡೆಸುತ್ತಿವೆ. ಹಲವು ಮುಸ್ಲಿಂ ಧಾರ್ವಿುಕ ಸ್ಥಳಗಳು ಕೂಡ ಇದೇ ಪರಿಸ್ಥಿತಿಯಲ್ಲಿವೆ. ಕರೊನಾ ಸಂಕಟ ಅನುಭವಿಸುತ್ತಿರುವ ಪ್ರಮುಖ ದೇವಾಲಯಗಳ ಮಾಹಿತಿ ಇಲ್ಲಿದೆ.
ಪದ್ಮನಾಭಸ್ವಾಮಿ ದೇವಾಲಯ: ‘ದೇವರ ನಾಡು’ ಎಂದೇ ಕರೆಯಲಾಗುವ ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನ ಸಾಮಾನ್ಯವಾಗಿ ಪ್ರತಿ ತಿಂಗಳು ಗಳಿಸುವ ಆದಾಯ ಸುಮಾರು ಮೂರು ಕೋಟಿ ರೂಪಾಯಿ. ಈಗ ಕೇವಲ 7.5 ಲಕ್ಷ ರೂ. ಬರುತ್ತಿದೆ. ದೇವಸ್ಥಾನದ 307 ಸಿಬ್ಬಂದಿ ವೇತನ ಹಾಗೂ ಇತರ ವೆಚ್ಚಗಳಿಗೆ ಅದಕ್ಕೆ ಪ್ರತಿ ತಿಂಗಳು ಬೇಕಿರುವುದು 1.1 ಕೋಟಿ ರೂಪಾಯಿ.
ತಿರುಪತಿ: ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಿಂದು ದೇವಸ್ಥಾನ ಆಂಧ್ರಪ್ರದೇಶದಲ್ಲಿರುವ ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯ ಭಾರಿ ಆದಾಯ ನಷ್ಟ ಅನುಭವಿಸಿದೆ. ಲಾಕ್ಡೌನ್ ಹೇರಿಕೆ ಮುಂಚೆ ಅದರ ಮಾಸಿಕ ಆದಾಯ 200 ಕೋಟಿ ರೂ. ಇತ್ತು. ಈಗದು ಶೂನ್ಯಕ್ಕೆ ಇಳಿದಿದೆ. ದೇವಸ್ಥಾನದ ಮಾಸಿಕ ಖರ್ಚು ವೆಚ್ಚವೇ 150 ಕೋಟಿ ರೂಪಾಯಿಯಷ್ಟು. ‘ಹೆಚ್ಚುವರಿ ನಿಧಿ’ಯಿಂದ ಖರ್ಚು ನಿಭಾಯಿಸಲಾಗುತ್ತಿದೆ. ತಿರುಪತಿ ದೇವಸ್ಥಾನ 14,000 ಕೋಟಿ ರೂಪಾಯಿ ನಗದು ಮೀಸಲು ಹಣ ಹೊಂದಿದೆ.
ಶಬರಿಮಲೆ: ಲಾಕ್ಡೌನ್ನಿಂದಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಇದುವರೆಗೆ ಸುಮಾರು 100 ಕೋಟಿ ರೂ. ನಷ್ಟವಾಗಿದೆ.
ಶಿರಡಿ: ಮಹಾರಾಷ್ಟ್ರದಲ್ಲಿರುವ ಪ್ರಖ್ಯಾತ ಶಿರಡಿ ಸಾಯಿಬಾಬಾ ಮಂದಿರ ಪ್ರತಿ ತಿಂಗಳು 22 ಕೋಟಿ ಆದಾಯ ಗಳಿಸುತ್ತಿತ್ತು. ಸಾಯಿ ಸಂಸ್ಥಾನ ಒಟ್ಟು 6000 ಉದ್ಯೋಗಿಗಳನ್ನು ಹೊಂದಿದ್ದು ಅದರ ಮಾಸಿಕ ವೇತನ ವೆಚ್ಚ 18 ಕೋಟಿ ರೂಪಾಯಿ. ಈಗ ಆದಾಯ ತೀರಾ ಕುಸಿದಿರುವುದರಿಂದ ಮಾರ್ಚ್-ಏಪ್ರಿಲ್ ವೇತನ ನೀಡಲೂ ಸಾಧ್ಯವಾಗಿಲ್ಲ. ದೇವಸ್ಥಾನ 2,500 ಕೋಟಿ ರೂ. ನಗದು ಠೇವಣಿ ಹಾಗೂ ಗಣನೀಯ ಪ್ರಮಾಣದ ಚಿನ್ನ ಹೊಂದಿದೆ.
ಇದನ್ನೂ ಓದಿ: ಬ್ಯಾಟು ಹಿಡಿಯುತ್ತಿದ್ದ ಧವನ್ ಕೈಯಲ್ಲಿ ಕೊಳಲು
ಗುರುವಾಯೂರು ದೇವಸ್ಥಾನ: ಕೇರಳದ ಇನ್ನೊಂದು ಪ್ರಮುಖ ಮಂದಿರ ಗುರುವಾಯೂರು ದೇವಸ್ಥಾನದ ಮಾಸಿಕ ಗಳಿಕೆ ಐದು ಕೋಟಿ ರೂ.ನಿಂದ 1.5 ಲಕ್ಷಕ್ಕೆ ಇಳಿದಿದೆ. 700 ಕೆಜಿ ಬಂಗಾರವೂ ದೇವ ಸ್ಥಾನದ ಸುಪರ್ದಿಯಲ್ಲಿದೆ. ಇದರ ಮಾಸಿಕ ವೆಚ್ಚ ಸುಮಾರು 10 ಕೋಟಿ ರೂಪಾಯಿ. ದೇವಸ್ಥಾನ ಇಟ್ಟಿರುವ 1,529 ಕೋಟಿ ರೂ. ಠೇವಣಿಗೆ ಬರುವ ಬಡ್ಡಿ ಹಣದಿಂದ ಈ ವೆಚ್ಚವನ್ನು ಸದ್ಯ ನಿಭಾಯಿಸುತ್ತಿದೆ.
ದೇವಾಲಯಗಳಿಗೂ ತಟ್ಟಿದ ಲಾಕ್ಡೌನ್ ಬಿಸಿ
ನಷ್ಟ ಅನುಭವಿಸಿರುವ ಇತರ ಕೆಲವು ಪ್ರಮುಖ ದೇವಾಲಯಗಳು ಲಾಕ್ಡೌನ್ ಮುನ್ನ ಗಳಿಸುತ್ತಿದ್ದ ಮಾಸಿಕ ಆದಾಯದ ಮಾಹಿತಿ ಇಲ್ಲಿದೆ. ಲಾಕ್ಡೌನ್ ಬಳಿಕ ಆದಾಯ ಬಹುತೇಕ ಶೂನ್ಯವಾಗಿದೆ.
* ಸಿದ್ಧಿ ವಿನಾಯಕ ದೇವಸ್ಥಾನ, ಮುಂಬೈ: 8 ಕೋಟಿ ರೂ.
* ಹಾಜಿ ಅಲಿ ದರ್ಗಾ, ಮುಂಬೈ: 25ರಿಂದ 30 ಲಕ್ಷ ರೂ.
* ಕಾಮಾಕ್ಯ ದೇವಸ್ಥಾನ, ಅಸ್ಸಾಂ: 45ರಿಂದ 60 ಲಕ್ಷ ರೂ.
* ದರ್ಗಾ ಅಜ್ಮೇರ್, ರಾಜಸ್ಥಾನ: ಮಾಸಿಕ ವೆಚ್ಚ 55ರಿಂದ 60 ಲಕ್ಷ ರೂ. (ಆದಾಯ ವಿವರ ನೀಡಲು ಆಡಳಿತ ಮಂಡಳಿ ನಿರಾಕರಿಸಿದೆ).
* ಮಾತಾ ವೈಷ್ಣೋದೇವಿ ಮಂದಿರ, ಜಮ್ಮು: 1 ಕೋಟಿ ರೂ.
* ಜಗನ್ನಾಥ ಮಂದಿರ, ಪುರಿ: 90 ಲಕ್ಷ ರೂ.
* ಸ್ವರ್ಣ ಮಂದಿರ, ಪಂಜಾಬ್: 7 ಕೋಟಿ ರೂ.