

ನವದೆಹಲಿ: ಕೇಂದ್ರ ಸರ್ಕಾರ ದೇಶಾದ್ಯಂತ ಅನ್ವಯವಾಗುವಂತೆ ಈಗಾಗಲೆ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಿದೆ. ಆರ್ಥಿಕ ಚಟುವಟಿಕೆಗಳ ಮರುಆರಂಭಕ್ಕೆ ಅನುವಾಗುವಂತೆ ಕೆಲವೊಂದು ವಿನಾಯ್ತಿಗಳನ್ನೂ ನೀಡಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತದಲ್ಲಿ ಕೆಂಪು ವಲಯದಲ್ಲಿ ಬರುವ ಪ್ರದೇಶಗಳಲ್ಲಿ ಕೂಡ ಕೆಲವೊಂದು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಇಷ್ಟಾದರೂ ಲಾಕ್ಡೌನ್ 3.0ದಲ್ಲಿ ತಮಗೆ ಲಭ್ಯವಿರುವ ಸೌಲಭ್ಯಗಳು, ಏನೆಲ್ಲ ಮಾಡಬಹುದು, ಏನೆಲ್ಲ ಮಾಡಬಾರದು ಎಂಬ ಬಗ್ಗೆ ಅನುಮಾನಗಳು ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ ಜನರು ಆಗಾಗ್ಗೆ ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವ ಪ್ರಯತ್ನ ಮಾಡಲಾಗಿದೆ.
ಅನಗತ್ಯ ಚಟುವಟಿಕೆಗಳಿಗಾಗಿ ನಾನು ನಗರದಲ್ಲಿ ಓಡಾಡಬಹುದೇ?
ಸಾರ್ವಜನಿಕರ ಅನಗತ್ಯ ಓಡಾಟವನ್ನು ರಾತ್ರಿ 7ರಿಂದ ಮರುದಿನ ಬೆಳಗ್ಗೆ 7ರವರೆಗೆ ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರರ್ಥ ಬೆಳಗ್ಗೆ 7ರಿಂದ ರಾತ್ರಿ 7ವರೆಗೆ ಅನಗತ್ಯ ಚಟುವಟಿಕೆಗಳಿಗಾಗಿ ಓಡಾಡಬಹುದು. ಆದರೆ, ಕರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಈ ನಿಯಮದಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ.
ಅಂದರೆ ನಾನು ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ವಾಯುವಿಹಾರ ಅಥವಾ ಜಾಗಿಂಗ್ ಮಾಡಬಹುದೇ?
ವಾಸ್ತವದಲ್ಲಿ ಮಾಡಬಹುದಾಗಿದೆ. ಆದರೆ, ಆಯಾ ರಾಜ್ಯದ, ಆಯಾ ನಗರ ವ್ಯಾಪ್ತಿಯಲ್ಲಿ ಅಧಿಕಾರಿಗಳು ತೆಗೆದುಕೊಂಡಿರುವ ನಿರ್ಧಾರದ ಮೇಲೆ ಇದು ಅವಲಂಬಿತವಾಗಿದೆ.
ಮನೆಗೆಲಸದವರು ನಮ್ಮ ಮನೆಗೆ ಕೆಲಸಕ್ಕೆ ಬರಬಹುದೇ?
ಬೆಳಗ್ಗೆ 7ರಿಂದ ರಾತ್ರಿ 7ರ ನಡುವೆ ಮನೆಗೆಲಸದವರು ಕೆಲಸಕ್ಕೆ ಬರಬಹುದಾಗಿದೆ.
ನಾನು ನನ್ನ ಸ್ನೇಹಿತರು, ಬಂಧು-ಬಾಂಧವರನ್ನು ಭೇಟಿಯಾಗಬಹುದೇ?
ಸದ್ಯದ ನಿಯಮದ ಪ್ರಕಾರ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಸ್ನೇಹಿತರು, ಬಂಧು-ಬಾಂಧವರ ಭೇಟಿಗೆ ಅವಕಾಶವಿದೆ. ಆದರೆ ಇದು ಆಯಾ ನಗರಗಳಿಗೆ ಸೀಮಿತವಾಗಿ ಸ್ಥಳೀಯ ಆಡಳಿತದವರು ತೆಗೆದುಕೊಳ್ಳುವ ನಿರ್ಧಾರವನ್ನು ಇದು ಅವಲಂಬಿಸಿದೆ. ಆದರೆ, ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಾಜಕೀಯ ಸಭೆ ಸಮಾರಂಭಗಳ ಮೇಲೆ ನಿರ್ಬಂಧವಿದೆ.
ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿದೆಯೇ?
ಕೆಂಪು ವಲಯದಲ್ಲಿ ನಿರ್ದಿಷ್ಟ ಉದ್ದೇಶಕ್ಕಾಗಿ ಪಾಸ್ ಪಡೆದ ವಾಹನಗಳ ಸಂಚಾರಕ್ಕೆ ಮಾತ್ರವೇ ಅವಕಾಶವಿದೆ. ಆದರೆ ಒಬ್ಬ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿಗೆ ಮಾತ್ರವೇ ಅವಕಾಶ ಇರುತ್ತದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿಯ ಪ್ರಯಾಣಿಕರಿಗೆ ಅವಕಾಶ ಇರುವುದಿಲ್ಲ.
ಸಾರ್ವಜನಿಕ ಸಾರಿಗೆ ಸೌಲಭ್ಯ ಲಭ್ಯವಿರುತ್ತದೆಯೇ?
ನೀವು ಕೆಂಪು ವಲಯದಲ್ಲಿ ಇರುವಂಥವರಾದರೆ ಸಾರ್ವಜನಿಕ ಸಾರಿಗೆ ಬಸ್ಗಳು, ಕ್ಯಾಬ್, ಆಟೋರಿಕ್ಷಾ, ಮೆಟ್ರೋ ರೈಲುಗಳ ಸಂಚಾರ ಇರುವುದಿಲ್ಲ. ಕಿತ್ತಳೆ ವಲಯದಲ್ಲಿ ಇರುವಂಥವರಾದರೆ, ಅಂತರ್ಜಿಲ್ಲಾ ಸಂಚಾರ ಬಸ್ ಸಂಚಾರಕ್ಕೆ ನಿರ್ಬಂಧವಿದೆ. ಆದರೆ ಈ ವಲಯದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಹಸಿರು ವಲಯಗಳಲ್ಲಿ ಶೇ.50 ಪ್ರಯಾಣಿಕರೊಂದಿಗೆ ಬಸ್ಗಳು ಸಂಚರಿಸಬಹುದು.
ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಪಡೆದುಕೊಳ್ಳಬಹುದೇ?
ಕೆಂಪು ವಲಯದಲ್ಲಿ ಇದಕ್ಕೆ ನಿಷೇಧವಿದೆ. ಆದರೆ, ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಆ್ಯಪ್ ಆಧಾರಿತ ಕ್ಯಾಬ್ಗಳ ಸೇವೆಗಳನ್ನು ಪಡೆದುಕೊಳ್ಳಬಹುದು.
ಆನ್ಲೈನ್ ಶಾಪಿಂಗ್ ಮಾಡಬಹುದೇ?
ಅಗತ್ಯ ವಸ್ತುಗಳಿಗೆ ಸೀಮಿತವಾಗಿ ಆನ್ಲೈನ್ ಶಾಪಿಂಗ್ ಮಾಡಬಹುದು. ಕಿತ್ತಳೆ ಮತ್ತು ಹಸಿರು ವಲಯದಲ್ಲಿ ಇರುವವರು ಅಪೇಕ್ಷಿತ ವಸ್ತುಗಳನ್ನು ಆನ್ಲೈನ್ನಲ್ಲಿ ಖರೀದಿಸಬಹುದು.
ಮದ್ಯ ಮತ್ತು ತಂಬಾಕು ಪದಾರ್ಥಗಳನ್ನು ಖರೀದಿಸಲು ಅವಕಾಶವಿದೆಯೇ?
ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಮದ್ಯ ಮತ್ತು ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಅವಕಾಶವಿದೆ. ಆದರೆ ಸ್ಟಾಂಡ್ಅಲೋನ್ ಅಂಗಡಿಗಳಲ್ಲಿ ಮಾತ್ರವೇ ಇದಕ್ಕೆ ಅವಕಾಶ ಕೊಡಲಾಗಿದೆ. ಮಾಲ್ಗಳಲ್ಲಿ ಇವುಗಳ ಮಾರಾಟ ಮತ್ತು ಖರೀದಿಯ ಮೇಲೆ ನಿರ್ಬಂಧವಿದೆ. ಮದ್ಯ ಮತ್ತು ತಂಬಾಕು ಮಾರಾಟ ಅಂಗಡಿಗಳು ಗ್ರಾಹಕರು ಕನಿಷ್ಠ ಅರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ಮದ್ಯ ಸೇವನೆಗೆ ನಿರ್ಬಂಧವಿದೆ.
ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವೇ?
ಖಾಸಗಿ ಮತ್ತು ಸಾರ್ವಜನಿಕ ಕಚೇರಿಗಳ ಸಿಬ್ಬಂದಿ ಎಲ್ಲರೂ ಆರೋಗ್ಯ ಆ್ಯಪ್ ಅನ್ನು ಕಡ್ಡಾಯವಾಗಿ ಬಳಸಬೇಕು. ಆಯಾ ವಿಭಾಗದ ಮುಖ್ಯಸ್ಥರು ಎಲ್ಲ ಸಿಬ್ಬಂದಿಯೂ ಆರೋಗ್ಯ ಆ್ಯಪ್ ಹೊಂದಿರುವಂತೆ ನೋಡಿಕೊಳ್ಳಬೇಕು. ಕೆಂಪು ಮತ್ತು ಕಿತ್ತಳೆ ವಲಯದಲ್ಲಿ ಗುರುತಿಸಲಾಗಿರುವ ಕಂಟೈನ್ಮೆಂಟ್ ಪ್ರದೇಶದ ನಿವಾಸಿಗಳಿಗೂ ಈ ಆ್ಯಪ್ ಕಡ್ಡಾಯವಾಗಿದೆ.