ನಕಲಿ ಕ್ಲಿನಿಕ್‌ಗೆ ಬಿತ್ತು ಬೀಗ

klr clink
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಕಲಿ ಕ್ಲಿನಿಕ್‌ಗೆ ಆರೋಗ್ಯಾಧಿಕಾರಿಗಳು ಗುರುವಾರ ಬೀಗ ಹಾಕಿದರು. ಆರ್‌ಸಿಎಚ್ ಅಧಿಕಾರಿ ಡಾ.ಚಂದನ್, ತಾಲೂಕು ಪ್ರಭಾರ ಟಿಎಚ್‌ಒ ಡಾ.ಶರೀಫ್ ಮತ್ತು ಸಿಬ್ಬಂದಿ ಇದ್ದರು.
Published on

ಕೋಲಾರ: ಜಿಲ್ಲೆಯಲ್ಲಿ ವಿವಿಧೆಡೆ ತಲೆಯೆತ್ತಿರುವ ನಕಲಿ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರ ವಿವಿಧೆಡೆ ದಾಳಿ ಮಾಡಿದ್ದು, ಶ್ರೀನಿವಾಸಪುರದಲ್ಲಿ ಕ್ಲಿನಿಕ್‌ವೊಂದನ್ನು ಸೀಜ್‌ ಮಾಡಿದ್ದಾರೆ.

ಜಿಲ್ಲೆಯ ಆರ್‌ಸಿಎಚ್ ಅಧಿಕಾರಿ ಡಾ.ಚಂದನ್ ನೇತೃತ್ವದಲ್ಲಿ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ, ತಾಡಿಗೋಳ್ ಕ್ರಾಸ್, ಲಕ್ಷ್ಮೀಪುರ ಕ್ರಾಸ್‌ನಲ್ಲಿದ್ದ ಸುಮಾರು ೧೦ಕ್ಕೂ ಹೆಚ್ಚು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ. ದಾಖಲೆ ಪರಿಶೀಲಿಸಿದಾಗ ನಕಲಿ ವೈದ್ಯರು ಎಂಬುದು ಸಾಭೀತಾಗಿದ್ದು, ನೋಟಿಸ್ ನೀಡಿದ್ದಾರೆ.
ತಾಲೂಕು ವ್ಯಾಪ್ತಿಯ ಗೌನಿಪಲ್ಲಿಯಲ್ಲಿ ರಾಮಕುಮಾರ್ ಕ್ಲಿನಿಕ್, ಮೂರ್ತಿ ಕ್ಲಿನಿಕ್, ರಾಮಕೃಷ್ಣ ಕ್ಲಿನಿಕ್, ವಿಷ್ಣುಪ್ರಿಯ ಪಾಲಿಕ್ಲಿನಿಕ್, ಎಸ್‌ಎಲï‌ಎನ್ ಕ್ಲಿನಿಕ್, ಶ್ರೀ ರಿಶಿವಿನಾಯಕ ಕ್ಲಿನಿಕ್‌ಗಳಿಗೆ ನೋಟಿಸ್ ನೀಡಿದ್ದು, ಲಕ್ಷ್ಮೀಪುರದಲ್ಲಿ ನರಸಮ್ಮ ಕ್ಲಿನಿಕ್ ಅನ್ನು ಸೀಜ್‌ ಮಾಡಲಾಗಿದೆ.
ಆರ್‌ಸಿಎಚ್ ಅಧಿಕಾರಿ ಡಾ.ಚಂದನ್ ಮಾತನಾಡಿ, ಜಿಲ್ಲೆಯ ಗಡಿಯಲ್ಲಿ ಆರ್‌ಎಂಪಿ ವೈದ್ಯರು ಕ್ಲಿನಿಕ್ ಇಟ್ಟುಕೊಂಡು ವೈದ್ಯರು ಎಂದು ಹೇಳಿ ಜನಕ್ಕೆ ಚಿಕಿತ್ಸೆ ನೀಡಿತ್ತಿದ್ದರು. ಇಂಥವರಲ್ಲಿ ಚಿಕಿತ್ಸೆ ಪಡೆದವರಲ್ಲಿ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಆಗಾಗ ಕಾರ್ಯಾಚರಣೆ ನಡೆಸಲಾಗುತ್ತಿದೆ. ದೂರುಗಳು ಬಂದಿರುವ ಕ್ಲಿನಿಕ್‌ಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೂ ಕಣ್ತಪ್ಪಿಸಿ ಕೆಲಸ ಮಾಡುತ್ತಿವೆ. ಅಂಥವುಗಳನ್ನು ಗುರುತಿಸಿ ಬೀಗ ಹಾಕಲಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net