

ಬೆಂಗಳೂರು: ರಾಜ್ಯ ಸರ್ಕಾರ ಲಾಕ್ಡೌನ್ ನಿಯಮವನ್ನು ಸಡಿಲಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ಸೂಚಿಸಿರುವ ಚಟುವಟಿಕೆಗಳಿಗೆ ಮಧ್ಯರಾತ್ರಿಯಿಂದಲೇ ಅವಕಾಶ ಕಲ್ಪಸಿದೆ.
ಕೃಷಿ ಚಟುವಟಿಕೆ, ಕೊರಿಯರ್ ಸೇವೆ, ನಿರ್ಮಾಣ ಕಾಮಗಾರಿ ಹಾಗೂ ಪ್ಯಾಕೇಜಿಂಗ್ ವಸ್ತುಗಳ ತಯಾರಿಕೆಗೆ ಅನುಮತಿ ನೀಡಲಾಗಿದೆ. ಈ ನಿಯಮಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ.
ಸಾರ್ವಜನಿಕರ ಸಾರಿಗೆ ಸಂಚಾರವನ್ನು ಮೇ.3ರವರೆಗೆ ನಿರ್ಬಂಧಿಸಲಾಗಿದೆ. ಪಾಸು ಹೊಂದಿರುವ ಖಾಸಗಿ ವಾಹನಗಳು ಸಂಚರಿಸಬಹುದಾಗಿದೆ.
ತುರ್ತು ಆರೋಗ್ಯ ಸೇವೆಯ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.
ಯಾವುದಕ್ಕೆ ರಿಯಾಯಿತಿ: ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, ಔಷಧಿ, ವೈದ್ಯಕೀಯ ಉತ್ಪನ್ನಗಳು, ಔಷಧಿಯ ಕಚ್ಚಾ ವಸ್ತು ತಯಾರಿಕೆಗೆ ಅನುಮತಿ ಕಲ್ಪಿಸಲಾಗಿದೆ.
ಆಹಾರ ಸಂಸ್ಕರಣಾ ಕೈಗಾರಿಕೆಗಳು, ಕಲ್ಲಿದ್ದಲು ಉತ್ಪಾದನೆ. ಗಣಿಗಾರಿಕೆ ಹಾಗೂ ಪ್ಯಾಕೇಜಿಂಗ್ ಘಟಕಗಳು ಕೂಡ ಕಾರ್ಯನಿರ್ವಹಿಸಲಿವೆ.
ರಸ್ತೆ, ನೀರಾವರಿ, ಕಟ್ಟಡ ನಿರ್ಮಾಣ , ಕೈಗಾರಿಕಾ ಯೋಜನೆಗಳ ನಿರ್ಮಾಣ, ಗ್ರಾಮೀಣ ಪ್ರದೇಶದ ಕೈಗಾರಿಕೆಗಳು ಆರಂಭಗೊಳ್ಳಲಿವೆ. ಆದರೆ ಕಾರ್ಮಿಕರನ್ನು ಹೊರಗಡೆಯಿಂದ ಕರೆ ತರಬಾರದು ಎಂದು ಸೂಚನೆ ನೀಡಲಾಗಿದೆ. ಸ್ಥಳದಲ್ಲೇ ಲಭ್ಯ ಇರುವ ಕಾರ್ಮಿಕರನ್ನು ಬಳಸಿಕೊಂಡು ಆರಂಭಿಸಬೇಕು ಎಂದು ಸೂಚಿಸಲಾಗಿದೆ.
ಎಲೆಕ್ಟ್ರಿಕಲ್ಸ್, ಪ್ಲಂಬರ್ಸ್, ಮೊಬೈಲ್ ರಿಪೇರಿ, ಯಂತ್ರಗಳ ರಿಪೇರಿ, ಬಡಗಿಗಳ ಸೇವೆಗೆ ಅನುಮತಿ ನೀಡಲಾಗಿದೆ.
ಲಾಕ್ಡೌನ್ ನಂತರ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ಸರ್ಕಾರದ ವರಮಾನಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಹೀಗಾಗಿ ಆರ್ಥಿಕತೆಗೆ ಚೇತರಿಕೆ ನಿಡಲು ಕೆಲವು ನಿಯಮಗಳನ್ನು ಸಡಿಲಿಸಲಾಗಿದೆ.
ಮೇ.3ರವರೆಗೆ ಮೆಟ್ರೋ ರೈಲು, ರೈಲು, ಬಸ್, ವಿಮಾನ ಸಂಚಾರ ಇರುವುದಿಲ್ಲ. ಅಲ್ಲದೆ ಹೋಟೆಲ್, ರೆಸ್ಟೋರೆಂಟ್, ಬಾರ್, ಮಾಲ್, ಚಿತ್ರಮಂದಿರಗಳು ತೆರೆಯುವುದಿಲ್ಲ.