

ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಆಯ್ಕೆಗೆ ಕಸರತ್ತು ತೀವ್ರಗೊಂಡಿದೆ. ಈಗಾಗಲೇ ಮೂರು ವರ್ಷಗಳ ಅವಧಿಯನ್ನು ಮುಗಿಸಿರುವ ಜಿಲ್ಲೆಗಳ ಅಧ್ಯಕ್ಷರ ಆಯ್ಕೆಗೆ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ರಾಜಕೀಯ ಶಕ್ತಿ ಕೇಂದ್ರವಾಗಿರುವ ರಾಮನಗರ ಜಿಲ್ಲೆಯಲ್ಲಿ ಬಹಳ ವರ್ಷಗಳಿಂದಲೂ ಬಿಜೆಪಿ ಬೇರೂರುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ, ಗಟ್ಟಿಯಾಗಿ ನೆಲೆಯೂರುವ ಕೆಲಸ ಬಲವಾಗಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಸಂಘಟನೆ ಮಾಡಲೇಬೇಕು ಎನ್ನುವ ಹಠಕ್ಕೆ ಬಿದ್ದು ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆದಿದೆ.
ಜಿಲ್ಲೆಯಲ್ಲಿ ಈಗಾಗಲೇ ನೂತನ ಅಧ್ಯಕ್ಷರ ಆಯ್ಕೆ ಚಟುವಟಿಕೆಗಳು ಆರಂಭವಾಗಿದ್ದು, ಮಂಗಳವಾರ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಆಕಾಂಕ್ಷಿಗಳ ಅಭಿಪ್ರಾಯವನ್ನು ಕೇಳಲಾಗಿದೆ. ಇಲ್ಲಿ 18 ಮಂದಿ ಅಧ್ಯಕ್ಷ ಸ್ಥಾನಕ್ಕಾಗಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಆಯ್ಕೆಯನ್ನು ಕಗ್ಗಂಟುಗೊಳಿಸಿದ್ದಾರೆ. ಮಾಗಡಿಯ ರಾಜೇಶ್, ಪ್ರಸಾದ್‌ಗೌಡ, ಚನ್ನಪಟ್ಟಣದ ಲಿಂಗೇಶ್ ಕುಮಾರ್, ಮಲವೇಗೌಡ, ಆನಂದಸ್ವಾಮಿ, ಜಯರಾಂ, ರಾಮನಗರದ ಎಸ್.ಆರ್.ನಾಗರಾಜು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಮುಖರು. ಇವರ ಪಟ್ಟಿಯನ್ನು ಜಿಲ್ಲೆಯ ಉಸ್ತುವಾರಿ ಹೊತ್ತಿದ್ದ ಜಯತೀರ್ಥ ಕಟ್ಟಿ ಅವರು ಪಡೆದುಕೊಂಡಿದ್ದಾರೆ.
ಪ್ರಸ್ತುತ ಜಿಲ್ಲಾಧ್ಯಕ್ಷ ಸ್ಥಾನವನ್ನು ಹುಲುವಾಡಿ ದೇವರಾಜು ನಿರ್ವಹಿಸುತ್ತಿದ್ದಾರೆ. ಇವರ ಉತ್ತರಾಧಿಕಾರಿ ಹುದ್ದೆಗೆ ಹಲವರ ಹೆಸರು ಕೇಳಿ ಬಂದಿವೆ. ಮುಂಬರುವ ಲೋಕಸಭೆ ಚುಣಾವಣೆ, ಜಿಪಂ, ತಾಪಂ ಚುನಾವಣೆಗಳ ಸಿದ್ಧತೆ ದೃಷ್ಟಿಯಲ್ಲಿಟ್ಟುಕೊಂಡು ಸಮರ್ಥರಿಗಾಗಿ ಹುಡುಕಾಟವೂ ನಡೆದಿದೆ. ಮಂಗಳವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖವಾಗಿ ಪಕ್ಷದ ಹಿರಿಯ ಮುಖಂಡ ಎಸ್.ಆರ್.ನಾಗರಾಜು, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಆನಂದಸ್ವಾಮಿ, ಮಾಗಡಿಯಲ್ಲಿ ಪರಾಜಿತಗೊಂಡಿರುವ ಪ್ರಸಾದ್‌ಗೌಡ, ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಂಪುರ ಮಲವೇಗೌಡ ನಡುವೆ ಫೈಟ್ ಏರ್ಪಟ್ಟಿದೆ.
ಹಿಂದೆ ಹಲವಾರು ಬಾರಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಟೆ ಹೊಂದಿರುವವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿರುವ ಉದಾಹರಣೆಗಳು ಇವೆ. ಪ್ರಮುಖ ನಾಯಕರ ಮೂಲಕ ಪ್ರಭಾವ ಬೀರಿ ಅಧ್ಯಕ್ಷ ಸ್ಥಾನ ಪಡೆದಿರುವ ಬಗ್ಗೆ ಈ ಹಿಂದೆಯೂ ಹಲವಾರು ಬಾರಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಈ ಬಾರಿ ಕೋರ್ ಕಮಿಟಿ ಮುಂದೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಅಹವಾಲುಗಳನ್ನು ಕೇಳಲಾಗಿದೆ. ಇಲ್ಲಿ ಬಹುತೇಕ ಆಕಾಂಕ್ಷಿಗಳು ತಮ್ಮ ಪಕ್ಷ ನಿಷ್ಠೆಯನ್ನು ವ್ಯಾಖ್ಯಾನಿಸುವ ಮೂಲಕ ತಮಗೇ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಅಂತಿಮವಾಗಿ ಹುದ್ದೆ ಪಕ್ಷ ನಿಷ್ಠೆಗೆ ಒಲಿಯುವುದೋ, ಇಲ್ಲ ವ್ಯಕ್ತಿ ನಿಷ್ಠೆಗೆ ಒಲಿಯುವುದೋ ಕಾದು ನೋಡಬೇಕಿದೆ.
ರಾಮನಗರ ಜಿಲ್ಲೆ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಯಾಗಿರುವುದರಿಂದ ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇವರ ಸಹೋದರ ಸಂಸದ ಡಿ.ಕೆ.ಸುರೇಶ್ ವಿರುದ್ಧ ಸೆಣಸಬೇಕಿದೆ. ಮತ್ತೊಂದೆಡೆ ಮೈತ್ರಿ ಪಕ್ಷವಾಗಿ ಗುರ್ತಿಸಿಕೊಂಡಿದ್ದರೂ ಜೆಡಿಎಸ್ ವಿರುದ್ಧವೂ ಪಕ್ಷ ಸಂಘಟನೆ ಮಾಡಲೇಬೇಕಿದೆ. ರಾಮನಗರ ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯವನ್ನು ಪಕ್ಷದತ್ತ ಸೆಳೆಯಬೇಕಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದವರನ್ನೇ ಆಯ್ಕೆ ಮಾಡಲು ಚಿಂತನೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ, ಕೋರ್ ಕಮಿಟಿ ನೀಡುವ ವರದಿ ಹಾಗೂ ಪಕ್ಷ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.
--
ನಾನು ಕಳೆದ ಹಲವಾರು ವರ್ಷಗಳಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದು, ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎನ್ನುವ ನಂಬಿಕೆ ಇದೆ. ಆನಂದ ಸ್ವಾಮಿ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ
--
ಪಕ್ಷದ ಹಿರಿಯ ಮುಖಂಡ. ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ. ಕೋರ್ ಕಮಿಟಿ ಮುಂದೆ ನನ್ನ ಅನಿಸಿಕೆಯನ್ನು ಹಂಚಿಕೊಂಡು ಅಧ್ಯಕ್ಷ ಸ್ಥಾನ ನೀಡುವಂತೆ ಕೋರಿದ್ದೇನೆ. ಅಧ್ಯಕ್ಷ ಸ್ಥಾನ ದೊರೆಯಲಿದೆ ಎನ್ನುವ ವಿಶ್ವಾಸವಿದೆ.ಎಸ್.ಆರ್.ನಾಗರಾಜು, ಹಿರಿಯ ಮುಖಂಡ