ಯೋಧರಿಗೆ ರಿಯಾಯಿತಿ ದರದಲ್ಲಿ ಸಾಲ ವಿತರಣೆ

Published on

ವಿರಾಜಪೇಟೆ: ಭಾರತೀಯ ಸೇನಾಪಡೆಯಲ್ಲಿ ದೇಶದ ರಕ್ಷಣೆಗಾಗಿ ಕಾರ್ಯನಿರ್ವಹಿಸಿದ ನಿವೃತ್ತ ಯೋಧರು ಹಾಗೂ ಹಾಲಿ ಯೋಧರಿಗೆ ವಿರಾಜಪೇಟೆ ಕೊಡವ ಸೌಹಾರ್ದ ಸಹಕಾರ ಸಂಘದಲ್ಲಿ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಹಾಗೂ ಅಪೇಕ್ಷಿತ ಸಾಲ ಪಡೆವ ಸಂದರ್ಭದಲ್ಲಿ ಸಾಮಾನ್ಯ ಬಡ್ಡಿ ದರಕ್ಕಿಂತ ಹೆಚ್ಚಿನ ರಿಯಾಯಿತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.

ಸಂಘವು ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ಮೂರು ತಾಲೂಕುಗಳ ಕಾರ್ಯವ್ಯಾಪ್ತಿ ಹೊಂದಿದೆ. 2024-25ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಂತೆ, ಸಹಕಾರಿಯ ಒಟ್ಟು ಸದಸ್ಯ ಸಂಖ್ಯೆ - 1325 ಹಾಗೂ ಪಾಲು ಬಂಡವಾಳ ಮೊತ್ತ ರೂ-97 ಲಕ್ಷ, ಒಟ್ಟು ಠೇವಣಿ 8.4 ಕೋಟಿ ರೂ.ಗಳಾಗಿದೆ. 8 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದ್ದಾರೆ. ಮಾರ್ಚ್ 31, 2025 ಅವಧಿಗೆ ಶೇ.98 ಸಾಲ ವಸೂಲಾಗಿದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2024-25ನೇ ಸಾಲಿನಲ್ಲಿ 20.55 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ರಷ್ಟು ಡಿವಿಡೆಂಡ್ ನೀಡಲಾಗುವುದು. ಆ.9 ರಂದು ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ನ ಸಭಾಂಗಣದಲ್ಲಿ 10.30 ಕ್ಕೆ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಹೇಳಿದರು.

ಉಪಾಧ್ಯಕ್ಷ ಚೇಂದಂಡ ವಸಂತ್ ಕುಮಾರ್, ನಿರ್ದೇಶಕರಾದ ನೆಲ್ಲಮಕ್ಕಡ ಬೆಳ್ಯಪ್ಪ, ಕಾಂಡಂಡ ಚರ್ಮಣ, ಐನಂಡ ಗಣಪತಿ, ವಾಂಚಿರ ನಾಣಯ್ಯ, ಕೇಳಪಂಡ ವಿಶ್ವನಾಥ್, ಚೇಂದ್ರಿಮಾಡ ನಂಜಪ್ಪ, ಬೊಳ್ಯಪಂಡ ಸುರೇಶ್, ವಾಟೇರಿರ ಪೂವಯ್ಯ, ಕೊಂಗಂಡ ನಾಣಯ್ಯ, ನೆಲ್ಲಚಂಡ ಭೀಮಯ್ಯ, ಮೇಕೆರಿರ ಪಾಲಿ ಸುಬ್ರಮಣಿ, ಕಾರ್ಯನಿರ್ವಣಾಧಿಕಾರಿ ಪಟ್ಟಡ ಟೀನಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net