ಸಾಲ ವಿತರಣೆ, ವಸೂಲಿ ಕಾನೂನುಬದ್ಧವಾಗಿರಲಿ

dc
ಫೈನಾನ್ಸ್ ಹಾಗೂ ಹಣಕಾಸು ಸಂಸ್ಥೆಗಳ ಪ್ರಮುಖರು ಹಾಗೂ ಅಧಿಕಾರಿಗಳೊಂದಿಗೆ ಡಿಸಿ ಗುರುದತ್ತ ಹೆಗಡೆ ಸಭೆ ನಡೆಸಿದರು. ಜಿ.ಕೆ.ಮಿಥುನ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಮೈಕ್ರೋ ಫೈನಾನ್ಸ್ ಮತ್ತಿತರ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಸಾಲ ನೀಡುವ ಮುನ್ನ ಸಾಲ ಪಡೆಯುವವರು ಈ ಹಿಂದೆ ಎಲ್ಲಿ ಹಾಗೂ ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಸಾಲ ನೀಡುವ ಹಾಗೂ ವಸೂಲಿ ಮಾಡುವ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.

ಹಣಕಾಸು, ಮೈಕ್ರೋ ಫೈನಾನ್ಸ್, ಸಾಲ ನೀಡುವ ಏಜೆನ್ಸಿಗಳು, ಗಿರವಿ, ಲೇವಾದೇವಿಗಾರರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಸುಲಭವಾಗಿ ಸಾಲ ನೀಡುತ್ತಿರುವ ಹಣಕಾಸು ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಆದರೆ ಓರ್ವ ವ್ಯಕ್ತಿಗೆ ಆತನ ಸಾಲ ಮರುಪಾವತಿಯ ಸಾಮರ್ಥ್ಯಕ್ಕಿಂತ ಹೆಚ್ಚು ಸಾಲ ನೀಡಿದರೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದರು.

ಇನ್ನೂ ನೋಂದಣಿಯಾಗದ ಗಿರವಿದಾರರು ತಕ್ಷಣ ನೋಂದಣಿ ಮಾಡಿಸಿಕೊಳ್ಳಬೇಕು. ಸಹಕಾರ ಸಂಘಗಳ ಉಪನಿಬಂಧಕರು ಈ ಕುರಿತು ಕ್ರಮ ಕೈಗೊಳ್ಳಬೇಕು. ಶಿವಮೊಗ್ಗದಲ್ಲಿ ಹಣಕಾಸು ಸಂಸ್ಥೆಗಳ ವಿಷಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇದೇ ಸನ್ನಿವೇಶ ಮುಂದುವರಿಯಲಿ ಎಂದರು.

ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಓರ್ವ ವ್ಯಕ್ತಿಗೆ ಪದೇಪದೆ ಸಾಲ ನೀಡಿ ಹೊರೆ ಮಾಡಬಾರದು. ಮರುಪಾವತಿ ಸಾಮರ್ಥ್ಯ ಪರಿಶೀಲಿಸಿ ಸಾಲ ನೀಡಬೇಕು. ಸಂಸ್ಥೆ ಸಾಲ ವಿತರಣೆ ಹಾಗೂ ವಸೂಲಾತಿ ಗುರಿ ನಿಗದಿ ಮಾಡಿದೆ ಎಂದು ಸಿಬ್ಬಂದಿ ಸಾಲಗಾರರ ಮೇಲೆ ಒತ್ತಡ ಹೇರಬಾರದು ಎಂದು ತಿಳಿಸಿದರು.

ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಕಲ್ಮನೆ, ನಬಾರ್ಡ್ ಡಿಡಿಎಂ ಶರತ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್ ಉಪಸ್ಥಿತರಿದ್ದರು. ವಿವಿಧ ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಸಹಕಾರ ಸಂಘಗಳ ಅಧಿಕಾರಿಗಳು, ಗಿರವಿದಾರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net