

ಬೆಂಗಳೂರು: ರಾಜ್ಯಕ್ಕೆ ಬೇಸಿಗೆ ಕಾಲದಲ್ಲಿ ಗರಿಷ್ಠ ಬೇಡಿಕೆಯನ್ನು ಅಂದಾಜಿಸಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಬಾಧಿಸದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಗ್ಯಾರಂಟಿ ನೀಡಿದ್ದಾರೆ.
ಬೆಸ್ಕಾಂ ಬೆಳಕು ಭವನದಲ್ಲಿ ಎಸ್ಕಾಂ ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಇಲಾಖೆ ಉನ್ನತಾಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮೂರು ತಿಂಗಳ ಬೇಸಿಗೆ ಪರೀಕ್ಷಾ ಕಾಲ ಎದುರಿಸಲು ಕಾರ್ಯತಂತ್ರ ಹೆಣೆಯಲಾಗಿದೆ ಎಂದು ವಿವರಿಸಿದರು.
ಜಲ ಹಾಗೂ ಶಾಖೋತ್ಪನ್ನ ಮೂಲದ ವಿದ್ಯುತ್ ಸ್ಥಾವರಗಳಲ್ಲಿ ವಾರ್ಷಿಕ ನಿರ್ವಹಣೆ, ಅಗತ್ಯವಿದ್ದಲ್ಲಿ ನವೀಕರಣ ಕೆಲಸ ಮುಗಿಸಿ ಸಾಮರ್ಥ್ಯಕ್ಕೆ ತಕ್ಕಂತೆ ಉತ್ಪಾದನೆಗೆ ಅಣಿಗೊಳಿಸಲಾಗಿದೆ. ಶಾಖೋತ್ಪನ್ನ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಸಂಗ್ರಹಿಸಿಡಲಾಗಿದೆ.
ಈ ಬಾರಿ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ್ದರಿಂದ ಕೃಷಿ, ನೀರಾವರಿ ಮತ್ತು ತೋಟಗಾರಿಕೆ ಪ್ರದೇಶ ವಿಸ್ತರಣೆಯಾಗಿದೆ. ಜನವರಿಯಿಂದಲೇ ತಾಪಮಾನ, ಒಣ ಹವೆ ಹೆಚ್ಚಳದಿಂದ ಗೃಹ ಬಳಕೆ ವಿದ್ಯುತ್ ಪ್ರಮಾಣ ಏರಿಕೆಯಾಗಿದೆ.
ಕಳೆದ ವರ್ಷ ಜನವರಿಗೆ ಹೋಲಿಸಿದರೆ ಶೇ.15 (ಎರಡು ಸಾವಿರ ಮೆ.ವಾ)ರಷ್ಟು ಬಳಕೆ ಹೆಚ್ಚಳ ಕಂಡು ಬಂದಿದೆ. ವಿದ್ಯುತ್ ಬೇಡಿಕೆ, ಬಳಕೆ ಹೆಚ್ಚಿಸಿದಷ್ಟು ಉದ್ಯಮ-ವಹಿವಾಟು, ಆರ್ಥಿಕತೆ ವೃದ್ಧಿಸಿ ಜನರು ಹಾಗೂ ರಾಜ್ಯದ ಖಜಾನೆಗೆ ಆದಾಯ ಹೆಚ್ಚುತ್ತದೆ ಎಂದು ಕೆ.ಜೆ.ಜಾರ್ಜ್ ವಿಶ್ಲೇಷಿಸಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ನಮ್ಮ ಅಧಿಕಾರಿಗಳ ತಂಡವು ಬೇಸಿಗೆಯ ಅಂದರೆ ಜೂನ್ ತನಕ ಪೀಕ್ ಅವರ್ ಲೋಡ್ ಎಷ್ಟಾಗಬಹುದು ಎಂದು ಅಂದಾಜಿಸಿದ್ದಾರೆ. ಇದರ ಪ್ರಕಾರವೇ ಬೇಕಾದ ವಿದ್ಯುತ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.
ಅಧಿಕೃತವಾಗಿ ದಾಖಲಾದ ಪ್ರಕಾರ ಗುರುವಾರದ ಗರಿಷ್ಠ ಅವಧಿ (ಪೀಕ್ ಅವರ್) ಬೇಡಿಕೆ 17,874 ಮೆ.ವಾ.ಗೆ ತಲುಪಿದೆ. ಕಳೆದ ವರ್ಷ ಇದೇ ದಿನ 16,214 ಮೆ.ವಾ. ಬೇಡಿಕೆ ದಾಖಲಾಗಿತ್ತು ಎಂದು ತುಲನಾತ್ಮಕವಾಗಿ ವಿವರಿಸಿದರು.
ಕಳೆದ ಬೇಸಿಗೆಯಲ್ಲಿ ಗರಿಷ್ಠ ಬೇಡಿಕೆ ಪ್ರಮಾಣ 17 ಸಾವಿರ ಮೆ.ವಾ. ದಾಟಿದರೂ ನಿಭಾಯಿಸಿದ್ದೇವೆ. ಈ ಬಾರಿ 18,500 ರಿಂದ 19 ಸಾವಿರ ಮೆ.ವಾ. ತಲುಪುವ ಅಂದಾಜಿದ್ದು, ಸ್ವಸಾಮರ್ಥ್ಯ, ಕೇಂದ್ರ ವಿದ್ಯುತ್ ಜಾಲದ ಹಂಚಿಕೆ ಹೊರತಾಗಿ ಬ್ಯಾಂಕಿಂಗ್, ದೀರ್ಘಾವಧಿ ವಿನಿಮಯದಡಿ ಖರೀದಿಗೂ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.