

ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ವಿದ್ಯುತ್ ಅಭಾವ, ಅನಿಯಮಿತ ಲೋಡ್ ಶೆಡ್ಡಿಂಗ್ ರಾಜ್ಯವನ್ನು ಕಾಡುತ್ತಿದೆ. ಗೃಹಜ್ಯೋತಿ ಯೋಜನೆಯೇ ಬಂದ್ ಆಗುವ ಮುನ್ಸೂಚನೆ(Load shedding Gruhajyoti bandh forecast) ಇದಾಗಿದೆ ಎಂದು ಜೆಡಿಎಸ್(JDS) ಲೇವಡಿ ಮಾಡಿದೆ.
ವಿದ್ಯುತ್ ಬೆಲೆ ಏರಿಕೆ ಪ್ರಸ್ತಾಪದ ಬೆನ್ನಲ್ಲೇ ಗೃಹಜ್ಯೋತಿ ಯೋಜನೆಗೆ ಎಳ್ಳು ನೀರು ಬಿಡಲು ಸರ್ಕಾರ ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುವ ಮೊದಲೇ ಗ್ಯಾರಂಟಿ ಯೋಜನೆಗಳು ಒಂದೊಂದಾಗಿ ಬಂದ್ ಆಗುತ್ತಿವೆ. ಸರ್ಕಾರಿ ಖಜಾನೆ ಖಾಲಿಯಾಗಿದ್ದು, ಯಾವುದೇ ಯೋಜನೆಗಳಿಗೂ ದುಡ್ಡಿಲ್ಲದೆ, ಜನರಿಂದಲೇ ದುಪ್ಪಟ್ಟು ವಸೂಲಿಗೆ ಸಿದ್ದರಾಮಯ್ಯ ಸರ್ಕಾರ ವಾಮಮಾರ್ಗ ಹಿಡಿದಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಆರ್ಥಿಕತೆ ಸದೃಢವಾಗಿದೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರೇ, ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡುವ ಬಗ್ಗೆ ಚಿಂತೆ ಯಾಕೆ? ಒಂಭತ್ತು ವಿಶ್ವವಿದ್ಯಾಲಯ ಮುಚ್ಚಲು ಹೊರಟಿರುವುದು ಏಕೆ? ಬೂಟಾಟಿಕೆಗೆ ಮತ್ತೊಂದು ಹೆಸರೇ ಕರ್ನಾಟಕ ಕಾಂಗ್ರೆಸ್. ನಿಮ್ಮ ಬಣ್ಣದ ಮಾತು, ಸುಳ್ಳು ಕೋರರ ಸಂತೆ ಎನ್ನುವುದಕ್ಕೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿರುವುದೇ ಸಾಕ್ಷಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.