ಕರ್ನಾಟಕ ಸರ್ಕಾರದ ಸಹಭಾಗಿತ್ವಕ್ಕೆ ಎಲ್ಎಎಂ ರೀಸರ್ಚ್ ಒಲವು

mb patil
Published on

ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಸೆಳೆಯಬೇಕೆಂಬ ಗುರಿಯೊಂದಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಎಲ್ಎಎಂ ರೀಸರ್ಚ್, ಲಿಯೋ ಲ್ಯಾಬ್ಸ್ ಮತ್ತು ಟೆಕಾಂಡ್ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ವಿಸ್ತೃತ ಮಾತುಕತೆ ನಡೆಸಿದ್ದಾರೆ.

ಐಟಿ,ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಸಾಥ್ ನೀಡಿದರು. ಈ ಮೂರೂ ಸಂಸ್ಥೆಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಇರುವ ಪೂರಕ ವಾತಾವರಣದ ಬಗ್ಗೆ ಸಚಿವರು ವಿವರಿಸಿದರು.

ಸೆಮಿಕಂಡಕ್ಟರ್ ಉತ್ಪನ್ನಗಳು ಮತ್ತು ಸೇವೆಗಳಿಗೆ ಹೆಸರಾಗಿರುವ ಎಲ್ಎಎಂ ರೀಸರ್ಚ್ ಕಂಪನಿಯು ಈ ಕ್ಷೇತ್ರದಲ್ಲಿ 23 ವರ್ಷಗಳ ಅನುಭವ ಹೊಂದಿದ್ದು, ಬೆಂಗಳೂರಿನಲ್ಲೇ ನೆಲೆ ಹೊಂದಿದೆ. ಮುಂದಿನ ತಲೆಮಾರುಗಳಿಗೆ ಅಗತ್ಯವಾದ ಪರಿಣತ ಎಂಜಿನಿಯರುಗಳನ್ನು ಸಜ್ಜುಗೊಳಿಸಲು ಉತ್ಸುಕವಾಗಿರುವ ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ಸಹಭಾಗಿತ್ವವನ್ನು ಬಯಸಿದೆ ಎಂದು ಪಾಟೀಲ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಸೆಮಿಕಂಡಕ್ಟರ್ ಆರ್.ಡಿ. ಪಾರ್ಕ್‌ನಲ್ಲಿ ನೂತನ ಪ್ರಯೋಗಾಲಯಗಳಲ್ಲಿ ರಚನಾತ್ಮಕ ಹೂಡಿಕೆ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಲು ಎಲ್ಎಎಂ ರೀಸರ್ಚ್ ಕಂಪನಿಯು ಮುಕ್ತವಾಗಿದೆ. ಇದನ್ನು ಸರ್ಕಾರದ ಪರವಾಗಿ ಸ್ವಾಗತಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಾಹ್ಯಾಕಾಶದ ಕಡೆಗೂ ಒಲವು

ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಹೆಸರಾಗಿರುವ ಲಿಯೋ(ಲೋ ಅರ್ತ್ ಆರ್ಬಿಟ್) ಲ್ಯಾಬ್, ಭಾರತದಲ್ಲಿ ರೆಡಾರುಗಳನ್ನು ಸ್ಥಾಪಿಸಲು ಮುಂದಾಗುವ ಖಾಸಗಿ ಕ್ಷೇತ್ರದವರಿಗೆ ಸರ್ಕಾರವು ನೀಡುವ ಅನುಮೋದನೆಗಳನ್ನು ಕುರಿತು ಅಧ್ಯಯನ ನಡೆಸುವ ಬಗ್ಗೆ ಚರ್ಚಿಸಿದೆ. ಜತೆಗೆ ರಾಜ್ಯದ ಬಾಹ್ಯಾಕಾಶ ಕಾರ್ಯಪರಿಸರದಲ್ಲಿ ಅದು ನೆಲೆಯೂರಲು ಆಸಕ್ತಿ ತಾಳಿದೆ. ಇದಕ್ಕಾಗಿ ನಮ್ಮಲ್ಲಿ ‘ಸ್ಪೇಸ್ ಟೆಕ್ ಸೆಂಟರ್ ಆ್ ಎಕ್ಸಲೆನ್ಸ್ ಸ್ಥಾಪನೆಗೆ ಕೈ ಜೋಡಿಸಲು ಅದು ಒಲವು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಗ್ ಡೇಟಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಟೆಕಾಂಡ್ ಕಂಪನಿಯ ಪ್ರತಿನಿಧಿಗಳು, ಬೆಂಗಳೂರಿನಲ್ಲಿ ತಮ್ಮ ಆರ್‌ಡಿ ಕೇಂದ್ರ ತೆರೆಯುವ ಬಗ್ಗೆ ಚರ್ಚಿಸಿದ್ದಾರೆ. ಇದು ಸಾಧ್ಯವಾದರೆ ರಾಜ್ಯದಲ್ಲಿ ಅಸೆಂಬ್ಲಿಂಗ್ ಮತ್ತು ಹಾರ್ಡ್‌ವೇರ್ ಉತ್ಪಾದನೆಯನ್ನು ಆರಂಭಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

2,3ನೇ ಹಂತದ ನಗರಗಳಿಗೆ ಪ್ರಯೋಜನ

ಬಿಗ್ ಡೇಟಾದಿಂದ ನಮ್ಮ 2 ಮತ್ತು 3ನೇ ಹಂತದ ನಗರಗಳಿಗೆ ಕೂಡ ಪ್ರಯೋಜನ ಸಿಗಲಿದೆ. ಇ-ಆಡಳಿತದಲ್ಲಿ ಕೂಡ ಅದು ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಲು ಬಯಸಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಯಾರು ಭಾಗವಹಿಸಿದ್ದರು?

ಮಾತುಕತೆಗಳಲ್ಲಿ ಎಲ್ಎಎಂ ರೀಸರ್ಚ್ ಕಂಪನಿಯ ಉಪಾಧ್ಯಕ್ಷರುಗಳಾದ ರಂಗೇಶ್ ರಾಘವನ್, ಕಾರ್ತಿಕ್ ರಾಮಮೋಹನ್, ಪ್ಯಾಟ್ ಲಾರ್ಡ್, ಲಿಯೋ ಲ್ಯಾಬ್ಸ್ ಕಂಪನಿಯ ಸಂಸ್ಥಾಪಕ ಡ್ಯಾನ್ ಸೀಪರ್ಲಿ, ರಚಿತ್ ಭಾಟಿಯಾ ಮತ್ತು ಟೇಕಾಂಡ್ ಕಂಪನಿಯ ಸಿಇಒ ಸಾಹಿಲ್ ಚಾವ್ಲಾ ಮತ್ತು ಸಹ ಸಂಸ್ಥಾಪಕ ರಮೇಶ್ ಸಿಂಗ್ ಭಾಗವಹಿಸಿದ್ದರು. ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಐಟಿ, ಬಿಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್ ಕೌರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net