

ಸುತ್ತೂರು: ಉತ್ಸವದಂತೆ ನಿತ್ಯ ಬದುಕನ್ನು ಆಚರಿಸಿಕೊಂಡರೆ ಜೀವನದ ಬಗ್ಗೆ ಧನ್ಯತಾಭಾವ ಮೂಡಲಿದೆ ಎಂದು ಪ್ರಾಧ್ಯಾಪಕ ಎಚ್.ಬಿ.ದೇವಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀ ಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಶ್ರಾವಣಮಾಸದ 29ನೇ ದಿನದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಇಡೀ ಜೀವನವನ್ನು ಒಮ್ಮೆಲೆ ಹಿಡಿದಿಡಲು ಸಾಧ್ಯವಾಗುವುದಿಲ್ಲ. ಆದರೆ ಒಂದು ದಿನವನ್ನು ಹಿಡಿದಿಡಲು ಸಾಧ್ಯವಿದ್ದು, ಆ ದಿನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮನುಷ್ಯನ ಬದುಕು ಸಾಗಬೇಕು ಎಂದರು.
ದಯವಿಲ್ಲದ ಧರ್ಮ ಯಾವುದಯ್ಯ? ಎಂದು ಬಸವಣ್ಣ ಪ್ರಶ್ನಿಸಿ ಧರ್ಮಕ್ಕೆ ದಯೆ ಮತ್ತು ಪ್ರೀತಿಯ ಅಡಿಪಾಯ ಹಾಕಿದರು. ಧರ್ಮ ಕೇವಲ ಬದುಕಿನ ಮಾರ್ಗವಲ್ಲ. ಅದು ಬದುಕಿನ ನೀತಿ ಸಂಹಿತೆ ಮತ್ತು ಸತ್ಯ ಶುದ್ಧ ಆಚರಣೆಯಾಗಿದೆ ಎಂದು ತಿಳಿಸಿದರು.