

ಬೆಂಗಳೂರು: ಬರಗಾಲದಿಂದ ಉಂಟಾಗಿರುವ ಬೆಳೆ ನಷ್ಟ ಸಮೀಕ್ಷೆಯಲ್ಲಿ ಲೋಪವಾಗಿವೆ. ಪರಿಹಾರ ಮೊತ್ತ ನಿಗದಿ, ವಿತರಣೆಯಲ್ಲೂ ದೋಷಗಳಾಗಿವೆ. ಈ ಅವ್ಯವಸ್ಥೆ ಸರಿಪಡಿಸಲು ರಾಜ್ಯ ಸರ್ಕಾರಕ್ಕೆ ರಾಜ್ಯ ರೈತ ಸಂಘಟನೆಗಳ 20 ದಿನಗಳ ಗಡುವು ವಿಧಿಸಿ, ಹೋರಾಟದ ಎಚ್ಚರಿಕೆ ನೀಡಿದೆ.
ರಾಜ್ಯ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ನಿಯೋಗವು ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಕಂದಾಯ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್ ಅವರಿಗೆ ಪ್ರತ್ಯೇಕವಾಗಿ ಮಂಗಳವಾರ ಭೇಟಿ ಮಾಡಿ ಚರ್ಚಿಸಿ, ಮನವಿಪತ್ರ ಸಲ್ಲಿಸಿತು.
ಬರಗಾಲಕ್ಕೆ ತುತ್ತಾದ ರೈತರಿಗೆ ಬಿಡುಗಡೆ ಮಾಡಿರುವ ಪರಿಹಾರ ಹಣ ಅಲ್ಪ. ಮಾರ್ಗಸೂಚಿ ಸರಿಯಾಗಿಲ್ಲ, ಬೆಳೆ ನಷ್ಟ ಸಮೀಕ್ಷೆಯೂ ಅಸಮರ್ಪಕವಾಗಿದೆ. ಇದರಿಂದಾಗಿ 70 ಲಕ್ಷ ರೈತರ ಬದಲು 27 ಲಕ್ಷ ರೈತರನ್ನು ಪರಿಗಣಿಸಲಾಗಿದೆ ಎಂದು ಆಕ್ಷೇಪಿಸಿತು.
ಸರ್ಕಾರದ ಸುತ್ತೋಲೆ ಪ್ರಕಾರ 223 ತಾಲೂಕುಗಳಲ್ಲಿ ಬೆಳೆ ನಷ್ಟ ಸಮೀಕ್ಷೆ, ಮಾರ್ಗಸೂಚಿಯಂತೆ ಬೆಳೆ ಹಾನಿಗೆ ಪರಿಹಾರ ಮೊತ್ತ ನಿಗದಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಸಮೀಕ್ಷೆ ಅವೈಜ್ಞಾನಿಕವಾಗಿದ್ದರೆ, ಪರಿಹಾರ ವಿತರಣೆ ಅಸಮರ್ಪಕವಾಗಿದೆ.
ಅನೇಕ ರೈತರಿಗೆ ಕೇವಲ 500 ರಿಂದ ಒಂದು ಸಾವಿರ ರೂ. ಪರಿಹಾರ ಸಿಕ್ಕಿದೆ. ಕೆಲವು ಜಿಲ್ಲೆಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾದ ಮೊತ್ತದಲ್ಲಿ ವಿಮಾ ಕಂತು ಮುರಿದುಕೊಳ್ಳಲಾಗಿದೆ ಎಂದು ನಿಯೋಗ ದೂರಿತು.
ನೀರಿಲ್ಲದೆ ಶೇ.30ರಷ್ಟು ಕಬ್ಬು ಒಣಗಿ ಹೋಗಿದೆ. ತೆಂಗು, ಭತ್ತ, 15 ಲಕ್ಷ ಕೃಷಿ ಪಂಪ್‌ಸೆಟ್ ಆಧಾರಿತ ಬೆಳೆಗಳು ಹಾನಿಗೀಡಾಗಿದ್ದು, ಈ ರೈತರಿಗೆ ಪರಿಹಾರ ವಿತರಿಸಿಲ್ಲ ಎಂದು ನಿಯೋಗದ ಮುಖಂಡರು ಆಕ್ಷೇಪಿಸಿದರು.
ಕಬ್ಬಿನ ಹೆಚ್ಚುವರಿ ದರ ಪ್ರತಿ ಟನ್‌ಗೆ 150 ರೂ. ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಆದೇಶಿಸಿತ್ತು. ಈವರೆಗೂ ಪಾಲನೆಯಾಗಿಲ್ಲ, ರೈತರಿಗೆ ಕೊಡಬೇಕಾದ 1500 ಕೋಟಿ ರೂ. ಬಾಕಿ ಹಣವನ್ನು ಕಾರ್ಖಾನೆಗಳು ಉಳಿಸಿಕೊಂಡಿವೆ ಎಂದು ಗಮನಸೆಳೆದರು.
ಮಳೆ ಅಭಾವದಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ಈ ಬಾರಿ ಬೆಳೆ ಬೆಳೆಯಬೇಡಿ ಎಂದು ಸರ್ಕಾರ ಸುತ್ತೋಲೆ ಹೊರಡಿಸಿತು. ಅದರಂತೆಯೇ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಯಾವುದೇ ಬೆಳೆ ಬೆಳೆದಿಲ್ಲ.
ಅಚ್ಚುಕಟ್ಟು ಪ್ರದೇಶದ ತಾಲೂಕುಗಳನ್ನು ಸರ್ಕಾರ ಬರಪೀಡಿತವೆಂದು ಗುರುತಿಸಿದೆ. ಆದರೆ, ಬೆಳೆ ನಷ್ಟ ಸಮೀಕ್ಷೆಗೆ ಆದೇಶಿಸಿದ್ದು, ಯಾವುದೇ ಬೆಳೆ ಬೆಳೆಯದ ರೈತರು ಪರಿಹಾರದಿಂದ ವಂಚಿತರಾಗಲಿದ್ದಾರೆ ಎಂದು ರೈತರ ನಿಯೋಗ ಕಳವಳ ವ್ಯಕ್ತಪಡಿಸಿತು.