ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ ಸಮಾಜದ ಪ್ರತಿಬಿಂಬ

kateel ashok pai programme
Published on

ಶಿವಮೊಗ್ಗ: ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಸಾಹಿತ್ಯ ಸಮಾಜದ ಪ್ರತಿಬಿಂಬ ಎಂದು ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಚ್.ಎಸ್.ನಾಗಭೂಷಣ್ ಬಣ್ಣಿಸಿದರು.

ನಗರದ ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ಸೋಮವಾರ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಪ್ರಥಮ ಪದವಿಯ ಐಚ್ಛಿಕ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯದ ವಿದ್ಯಾರ್ಥಿಗಳ ಆಲೋಚನೆಗಳು ವಿಭಿನ್ನವಾಗಿರುತ್ತವೆ. ಸಾಹಿತ್ಯವನ್ನು ಅಂಕ ಗಳಿಕೆ ಮಾತ್ರವಲ್ಲದೆ, ಅಭಿರುಚಿ ಮತ್ತು ಆನಂದಕ್ಕಾಗಿ ಓದಬೇಕು ಎಂದರು.

ತರಗತಿಗಳು ಬರಿ ತರಗತಿಗಳಾಗಿ ಇರುವುದಿಲ್ಲ. ನಮ್ಮ ಯೋಚನಾ ಲಹರಿಯನ್ನು ಉನ್ನತಗೊಳಿಸುವ, ವಿಭಿನ್ನ ಆಲೋಚನಾ ಕ್ರಮಗಳನ್ನು ರೂಢಿಸಿಕೊಳ್ಳುವ ಅವಕಾಶಗಳಾಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಿರ್ದಿಷ್ಟ ಪಠ್ಯ ಓದುವಾಗ ಆ ಪಠ್ಯದ ಕರ್ತೃ ಮತ್ತು ಪಠ್ಯದ ಹಿನ್ನಲೆಯನ್ನು ತರಗತಿಗಳಲ್ಲಿ ಕಲ್ಪಿಸಿಕೊಂಡು ಆಳವಾದ ಅಧ್ಯಯನದ ಮೂಲಕ ಕೃತಿಯನ್ನು ತನ್ನೊಳಗೆ ತೆಗೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಅವಕಾಶ ಒದಗಿಸಿಕೊಡುತ್ತಿದೆ. ಅವುಗಳ ಸದುಪಯೋಗ ಮಾಡಿಕೊಂಡು ಮುಂದಿನ ಜೀವನ ರೂಪಿಸಿಕೊಳ್ಳಬೇಕು. ಮನಶಾಸ್ತ್ರ ಮತ್ತು ಸಾಹಿತ್ಯ ಒಟ್ಟಿಗೆ ಓದುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದರು.

ಮಾನಸ ಟ್ರಸ್ಟ್ ನಿರ್ದೇಶಕ ಡಾ. ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿ ಪ್ರೊ. ರಾಮಚಂದ್ರ ಬಾಳಿಗ, ಐಕ್ಯೂಎಸಿ ಸಂಯೋಜಕ ಡಾ. ಅರ್ಚನಾ ಭಟ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ರೇಷ್ಮಾ, ಉಪನ್ಯಾಸಕರಾದ ಗಣೇಶ್ ಪ್ರಸಾದ್, ಯೋಷಿತಾ ಎಸ್ ಸೊನಲೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net