

ಕೋಲಾರ: "ಕಾಮರೂಪಿ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ದೇಶದ ಹೆಸರಾಂತ ಪತ್ರಕರ್ತ, ಸಾಹಿತಿ ಎಂ.ಎಸ್.ಪ್ರಭಾಕರ (87) ವಯಸ್ಸಹಜವಾಗಿ ನಗರದ ಕಠಾರಿಪಾಳ್ಯದ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ ನಿಧನರಾದರು.
ಅವಿವಾಹಿತರಾಗಿದ್ದ ಕಾಮರೂಪಿ ಆಸೆಯಂತೆ ದೇಹವನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಯಿತು. ಕಠಾರಿಪಾಳ್ಯದಲ್ಲಿ ವಾಸವಾಗಿದ್ದ ಅವರು, ದೇಶ&ವಿದೇಶಗಳ ಪತ್ರಿಕೆ ಹಾಗೂ ವೆಬ್ಸೈಟ್ಗಳಿಗೆ ಅಂಕಣ ಬರೆಯುತ್ತಿದ್ದರು. ಸೃಜನಶೀಲತೆ ಮತ್ತು ವಿದ್ವತ್ತು ಎರಡನ್ನೂ ಮೇಳೈಸಿದ ಪತ್ರಕರ್ತರಾಗಿದ್ದ ಅವರು 2018ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಮೊಟ್ಲಹಳ್ಳಿ ಸೂರಪ್ಪ ಪ್ರಭಾಕರ 1936ರಲ್ಲಿ ಕೋಲಾರದಲ್ಲಿ ಜನಿಸಿದರು. ನಗರದಲ್ಲಿಯೇ ಆರಂಭಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವೀಧರರಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದು ಅಲ್ಲಿಯೇ ಕೆಲದಿನ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ದಣ ಆಫ್ರಿಕಾದಲ್ಲಿ ವಿಶೇಷ ವರದಿಗಾರ: ಅಸ್ಸಾಂನ ಗುವಾಹಟಿ ವಿವಿಯಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ರೀಡರ್ ಆಗಿ 1962ರಿಂದ 65ರವರೆಗೂ ಕಾರ್ಯನಿರ್ವಹಿಸಿದ್ದರು. ತಮ್ಮ ಅಗಾಧ ಇಂಗ್ಲಿಷ್ ಪಾಂಡಿತ್ಯದಿಂದಾಗಿ ಪ್ರತಿಷ್ಠಿತ ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ ಸಹಾಯಕ ಸಂಪಾದಕರಾಗಿ ಏಳು ವರ್ಷ ಕೆಲಸ ಮಾಡಿದ್ದ ಅವರು ನಂತರ, ದಿ ಹಿಂದೂ ಪತ್ರಿಕೆಯ ವಿಶೇಷ ಬಾತ್ಮಿದಾರರಾಗಿ ಅಸ್ಸಾಮಿನ ರಾಜಕಾರಣ, ಅಭಿವೃದ್ಧಿ ಮೊದಲಾದ ವರದಿಗಳನ್ನು ಮಾನವೀಯ ದೃಷ್ಟಿಕೋನದಲ್ಲಿ ನೀಡಿ ಗಮನ ಸೆಳೆದರು. ನಂತರ ಅದೇ ಪತ್ರಿಕೆಯ ವರದಿಗಾರರಾಗಿ ದಕ್ಷಿಣ ಆಫ್ರಿಕಾದಲ್ಲಿ ಸುಮಾರು ಹತ್ತು ವರ್ಷ ಕೆಲಸ ಮಾಡಿದರು.
ದಕ್ಷಿಣ ಆಫ್ರಿಕಾ ರಾಜಕೀಯ ತಳಮಳದಲ್ಲಿದ್ದ ಕಾಲ ಅದಾಗಿತ್ತು. ಅಲ್ಲಿಯ ಸಾಮಾಜಿಕ ಬದುಕು ಮತ್ತು ರಾಜಕೀಯ ತಲ್ಲಣಗಳ ಕುರಿತು ವ್ಯಾಪಕವಾಗಿ ಅನೇಕ ಮಹತ್ವದ ಲೇಖನಗಳನ್ನು ಅವರು ಬರೆದರು. ಅಲ್ಲಿನ ಸ್ವಾತಂತ್ರ್ಯಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಸಂದರ್ಶನ ನಡೆಸಿದ ಭಾರತದ ಮೊದಲ ಪತ್ರಕರ್ತ ಎಂಬ ಖ್ಯಾತಿ ಅವರಿಗಿದೆ.
ಕಾಮರೂಪಿ ಕಾವ್ಯನಾಮ: ಈಶಾನ್ಯ ಭಾರತದ ಅಸ್ಸಾಂನಲ್ಲಿ ಬಹಳ ವರ್ಷ ನೆಲೆಸಿದ್ದ ಎಂ.ಎಸ್. ಪ್ರಭಾಕರ ಅವರು ಪ್ರಾಚಿನ ಅಸ್ಸಾಂನ ಪ್ರದೇಶವೊಂದರ ಕಾಮರೂಪ ಹೆಸರನ್ನೇ ತಮ್ಮ ಕಾವ್ಯನಾಮವಾಗಿ ಬಳಸಿಕೊಂಡರು. 2002ರಲ್ಲಿ ಸೇವೆಯಿಂದ ನಿವೃತ್ತರಾದರು.
ಕೃತಿಗಳು: ಊಳಿಗಮಾನ್ಯ ಪದ್ಧತಿಯ ಸಮಾಜದ ಒಳಸ್ವರೂಪವನ್ನು ಬಿಚ್ಚಿಡುವ ಅವರ "ಕುದುರೆಮೊಟ್ಟೆ',"ಅಂಜಿಕಿನ್ಯಾತಕಯ್ಯ' ಕಾದಂಬರಿಗಳು ಹಾಗೂ ಕಥಾ ಸಂಕಲನ "ಒಂದು ತೊಲ ಪುನುಗು ಮತ್ತು ಇತರ ಕಥೆಗಳು' ಕನ್ನಡ ಸಾಹಿತ್ಯಲೋಕದಲ್ಲಿ ಅವರಿಗೆ ಭದ್ರ ನೆಲೆ ಒದಗಿಸಿವೆ. ಹಿರಿಯ ನಿರ್ದೇಶಕ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ "ಕುದುರೆಮೊಟ್ಟೆ' ಚಲನಚಿತ್ರವಾಗಿಯೂ ಗಮನ ಸೆಳೆದಿತ್ತು. ಕಡಿಮೆ ಕೃತಿಗಳನ್ನು ಕೊಟ್ಟರೂ ಗಟ್ಟಿಯಾದ ಸಾಹಿತ್ಯ ಅವರದಾಗಿತ್ತು.
ಹುಟ್ಟೂರಿನ ಪ್ರೇಮ: ಹುಟ್ಟೂರಿನ ಪ್ರೇಮದಿಂದಾಗಿ ನಿವೃತ್ತಿ ಬಳಿಕ ಪೂರ್ವಿಕರು ವಾಸವಾಗಿದ್ದ ಕೋಲಾರ ಕಠಾರಿಪಾಳ್ಯದ ನಿವಾಸದಲ್ಲಿಯೇ ನೆಲೆಸಬೇಕು ಎಂಬ ಆಸೆಯಿಂದ 2002ರಿಂದ ಕೋಲಾರದ ಮನೆಯಲ್ಲಿ ಜೀವನ ನಡೆಸುತ್ತಿದ್ದರು.
ಮಿತಭಾಷಿಯಾಗಿದ್ದ ಕಾಮರೂಪಿ ಸನ್ಮಾನ&ಸತ್ಕಾರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೂ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದಿಂದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗಿತ್ತು. 2016ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪತ್ರಕರ್ತ ಸಂದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪತ್ರಕರ್ತರಾದ ಕೆ.ಎಸ್.ಗಣೇಶ್, ಮುನಿರಾಜು, ಸ.ರುನಾಥ್, ಪಾ.ಶ್ರೀ. ಅನಂತರಾಮ್, ಆದಿಮಾಕೋಮಣ್ಣ, ಎಚ್.ಎ.ಪುರುಷೋತ್ತಮ್, ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ, ಚಂದ್ರಪ್ರಕಾಶ್, ಓಂಕಾರಮೂರ್ತಿ ಮೊದಲಾದವರು ಅಂತಿಮ ದರ್ಶನ ಪಡೆದುಕೊಂಡರು. ಬೆಂಗಳೂರಿನಿಂದ ಆಗಮಿಸಿದ್ದ ಎನ್.ಎ.ಎಂ. ಇಸ್ಮಾಯಿಲ್ ಇತರರು ದೇಹವನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾನ ಮಾಡಲು ವ್ಯವಸ್ಥೆ ಮಾಡಿದರು.
ಇಂದು ನುಡಿನಮನ: ಜಿಲ್ಲಾ ಕಸಾಪ ವತಿಯಿಂದ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ 12ಕ್ಕೆ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ ಕೋರಿದ್ದಾರೆ.