

ಶಿವಮೊಗ್ಗ: ಸಾಮಾಜಿಕ ನಂಬಿಕೆ ಕುರಿತಾಗಿನ ಆತಂಕಗಳಿಗೆ ಸಾಹಿತ್ಯ ದಾರಿದೀಪವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.
ಆದಿಚುಂಚನಗಿರಿ ಸಮುದಾಯದಲ್ಲಿ ಏರ್ಪಡಿಸಿದ್ದ 225ನೇ ಸಾಹಿತ್ಯ ಹುಣ್ಣಿಮೆ ಉದ್ಘಾಟಿಸಿ ಮಾತನಾಡಿ, ಜನರು ಇರುವಲ್ಲಿಗೆ ತೆರಳಿ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ತರುವ ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲೆಯ ಅನೇಕ ತಾಲೂಕು, ಹೋಬಳಿ, ಹಳ್ಳಿಗಳಲ್ಲೂ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಸಂಘಟಿಸಿದ್ದೇವೆ ಎಂದು ತಿಳಿಸಿದರು.
ಎಲ್ಲಿ ಸಾಹಿತ್ಯ ಹುಣ್ಣಿಮೆ ನಡೆಯುತ್ತದೆಯೋ ಅಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆಗೆ ಕರೆತಂದು ಸುತ್ತಲಿನವರಿಗೆ ಪರಿಚಯಿಸುತ್ತಿದ್ದೇವೆ. ಆ ಎಲ್ಲ ಪ್ರತಿಭೆಗಳು ಸಮಾಜದ ಸ್ವತ್ತಾಗಬೇಕು. ಅವರಿಂದ ಸಮ ಸಮಾಜದಲ್ಲಿ ಒಳ್ಳೆಯದನ್ನು ಬಿತ್ತುವ ಪ್ರಯತ್ನ ನಮ್ಮದಾಗಿದ್ದು, ಆಂದೋಲನ ರೀತಿಯಲ್ಲಿ ರೂಪಿಸುತ್ತಿದ್ದೇವೆ. ಕವನ, ಕಥೆ, ಪ್ರಬಂಧ, ವಿಚಾರ ಮಂಡನೆಗೆ ಗಮನಹರಿಸುವ ಅಗತ್ಯವಿದೆ ಎಂದರು.
ರಂಗಕರ್ಮಿ ಡಾ. ಜಿ.ಆರ್.ಲವ ಕಥೆ ಹೇಳಿ, ಕವನ ವಾಚಿಸಿದರು. ಕವಿಗಳಾದ ಶ್ರೀಕಾಂತ್, ಬಿ.ಟಿ.ಅಂಬಿಕಾ, ಎಸ್.ರುದ್ರೇಶ್ ಆಚಾರ್, ಕುಪ್ಪೇರಾವ್ ಕವನ ವಾಚಿಸಿದರು. ರಾಮಕೃಷ್ಣ ವಿದ್ಯಾಲಯ ಗೋಪಾಳ, ಬಿಜಿಎಸ್ ಆಂಗ್ಲ ಮಾಧ್ಯಮ, ಬಿಜಿಎಸ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹಾಡು, ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಪ್ರಧಾನ ಕಾರ್ಯದರ್ಶಿ ಭೈರಾಪುರ ಶಿವಪ್ಪ ಗೌಡ ಇದ್ದರು.