

ತೀರ್ಥಹಳ್ಳಿ: ಸಾಹಿತ್ಯ ಓದು ಮನರಂಜನೆಗಾಗಿ ಸೀಮಿತವಾಗಿಲ್ಲ. ಬದುಕಿನ ಹುಡುಕಾಟವೇ ಸಾಹಿತ್ಯದ ಅಧ್ಯಯನದ ಪ್ರಧಾನ ಆಶಯ ಆಗಬೇಕು ಎಂದು ನಿವೃತ್ತ ಪ್ರಾಚಾರ್ಯ ಬಿ.ಎಂ.ಜಯಶೀಲ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಬಾಳೇಬೈಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ, ಐಕ್ಯೂಎಸಿ ಘಟಕದಿಂದ ಗುರುವಾರ ಆಯೋಜಿಸಿದ್ದ ಕಲ್ಲಾರೆ ವೆಂಕಟಾಚಲಯ್ಯ ಮತ್ತು ಎಂ.ಕೆ.ಇಂದಿರಾ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ಓದಿನಲ್ಲಿ ಹೊಸತನ್ನು ಅಳವಡಿಸಿಕೊಳ್ಳುವ ಬಗ್ಗೆ ಚಿಂತಿಸಬೇಕು ಎಂದರು.
ಮಾನವ ನಿರ್ಮಿತ ನ್ಯಾಯಗಳ ಬಗ್ಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ನಂಬಿಕೆ ಇರಲಿಲ್ಲ. ಜೀವನದ ನೆಮ್ಮದಿ ಹುಡುಕಾಟದಲ್ಲಿ ಅವರು ಸಣ್ಣಕತೆಗಳಿಗೆ ಸ್ಪಷ್ಟತೆ ತಂದುಕೊಟ್ಟಿದ್ದಾರೆ. ಅವರ ಸಾಹಿತ್ಯ ಆಪ್ತವಾಗಿದ್ದು ಭಾವನೆಗಳನ್ನು ಕೆರಳಿಸುವುದಿಲ್ಲ. ಮನುಷ್ಯನ ಬದುಕನ್ನು ಉದ್ಧಾರ ಮಾಡುವ ವಿಷಯಗಳನ್ನು ಪ್ರಾಸ್ತಾಪಿಸುತ್ತದೆ ಎಂದು ತಿಳಿಸಿದರು.
ಎಂ.ಕೆ.ಇಂದಿರಾ ಸಮಾಜದೊಳಗಿನ ಲಿಂಗ ತಾರತಮ್ಯ ಎತ್ತಿ ಹಿಡಿದಿದ್ದಾರೆ. ಅವರ ಸಾಹಿತ್ಯದಲ್ಲಿ ಪ್ರಖರ ವೈಚಾರಿಕತೆ, ಮೌಲ್ಯ, ಜೀವನಾನುಭವದ ಜತೆಗೆ ಅಕ್ರಮ, ಅನಾಚಾರ, ಕಪಟ, ಅಮಾಯಕತೆ, ಕಂದಾಚಾರ, ಮಡಿ-ಮೈಲಿಗೆ, ಬಾಲ್ಯವಿವಾಹದಂತಹ ಕೆಟ್ಟ ಪದ್ಧತಿಗಳ ವಿರುದ್ಧ ದನಿಯೆತ್ತಿರುವುದನ್ನು ಕಾಣಬಹುದು. ಅಲ್ಲದೆ ಮಲೆನಾಡಿನ ಬಟ್ಟೆ, ಆಭರಣ, ನಂಬಿಕೆ, ಗಾದೆ, ಆಟ, ಸಾಂಪ್ರದಾಯಿಕ ಶೈಲಿಯನ್ನು ಉತೃಷ್ಟವಾಗಿ ಕತೆ, ಕಾದಂಬರಿಗಳಲ್ಲಿ ಬಿಂಬಿಸಿದ್ದಾರೆ ಎಂದು ನಿವೃತ್ತ ಉಪನ್ಯಾಸಕಿ ಕೆ.ಆರ್.ಉಮಾದೇವಿ ಉರಾಳ್ ಹೇಳಿದರು.
ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಗುಣ ಕಡಿಮೆಯಾಗುತ್ತಿದೆ. ಐಚ್ಛಿಕ ಕನ್ನಡ ತೆಗೆದುಕೊಂಡ ಮಕ್ಕಳೇ ಪಂಪ, ರನ್ನ, ಹಳೆಗನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಾಚಾರ್ಯ ಎಚ್.ಡಿ.ಧರ್ಮಣ್ಣ ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಕನ್ನಡ ವಿಭಾಗದ ಮುಖ್ಯಸ್ಥೆ ಕೆ.ಸಿ.ಸೌಮ್ಯಾ, ಐಕ್ಯೂಎಸಿ ಸಂಚಾಲಕ ಎಚ್.ಎ.ಗಣಪತಿ, ಉಪನ್ಯಾಸಕ ಮಾರುತಿ, ಗಾಯತ್ರಿ ಶೇಷಗಿರಿ, ಸೌಳಿ ನಾಗರಾಜ್ ಇತರರಿದ್ದರು.