

ಭದ್ರಾವತಿ: ನಮ್ಮ ವಿದ್ಯಾರ್ಥಿಗಳು ಕವಿ, ಕಥೆಗಾರರು, ಪ್ರಬಂಧಕಾರರಾಗಿ ಸೃಜನಶೀಲ ಮನಸ್ಸುಗಳನ್ನು ಹೊಂದಿರುವ ಕ್ರಿಯಾಶೀಲರನ್ನಾಗಿ ರೂಪಿಸಲು ಕಮ್ಮಟ ಸಹಕಾರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲೂಕು ಸಮಿತಿ, ಬಿಇಒ ಕಚೇರಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾವ್ಯ, ಕತೆ ಹಾಗೂ ಪ್ರಬಂಧ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜತೆಗೆ ಭಾಷೆ, ಸಾಹಿತ್ಯ, ಸೃಜನ ಚಿಂತನೆ ಎಲ್ಲವೂ ಅನುಭವಕ್ಕೆ ಬರಬೇಕು. ಆದರೆ ಅಂಕಗಳ ಹಿಂದೆ ಓಡುವ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ ಕಡಿಮೆಯಾಗುತ್ತಿದೆ. ಕಳೆದ 19 ವರ್ಷಗಳಿಂದ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತ ಕ್ರಿಯಾಶೀಲಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮ ಸಮಯ ಅಮೂಲ್ಯ. ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಭದ್ರಾವತಿ ಬಿಇಒ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಲು ಕಮ್ಮಟ ಉಪಯುಕ್ತವಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬರೆಯಲು, ಮಾತನಾಡಲು ಸಾಧ್ಯವಾಗದಿದ್ದರೆ ಆಲಿಸುವ, ಮಾತನಾಡುವ ಕೌಶಲ ಬೆಳೆಸಿಕೊಳ್ಳಬೇಕು. ಪ್ರಾಥಮಿಕ ಶಿಕ್ಷಣ ಭದ್ರ ಬುನಾದಿ ಹಾಕಬೇಕು. ಕೆಲವೆಡೆ ಇಂತಹ ಪ್ರಯತ್ನಗಳಾಗುತ್ತಿಲ್ಲ ಎಂಬ ಕೊರಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಸಾಹಿತಿ ಡಾ. ಎಚ್.ಟಿ.ಕೃಷ್ಣಮೂರ್ತಿ, ಉಪನ್ಯಾಸಕ ಡಾ. ಜಿ.ಆರ್.ಲವ, ಅಂಕಣಕಾರ ಬಿ.ಚಂದ್ರೇಗೌಡ, ಉಪಪ್ರಾಚಾರ್ಯ ದಯಾನಂದ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ಉಮಾಪತಿ, ರವೀಂದ್ರ, ಕಾಂತರಾಜ್ ಉಪಸ್ಥಿತರಿದ್ದರು.