

ಬೆಂಗಳೂರು: ಮದ್ಯದಂಗಡಿ ಪರವಾನಗಿ ಹರಾಜು ಪ್ರಕ್ರಿಯೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 579 ಮದ್ಯದ ಅಂಗಡಿಗಳ ಪರವಾನಗಿ ಹರಾಜು ಹಾಕುವ ಸಂಬಂಧ ತಯಾರಿ ನಡೆಯುತ್ತಿದೆ. ಮೀಸಲಾತಿ ಮೇಲೆ ಹರಾಜು ಮಾಡಬೇಕಾ ಅಥವಾ ಸಾಮಾನ್ಯ ಹರಾಜು ಮಾಡಬೇಕೆಂಬುದು ನಿರ್ಧಾರ ಆಗಿಲ್ಲ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಮದ್ಯದ ಅಂಗಡಿಯ ಪರವಾನಗಿ ಪಡೆಯಲು ಎಲ್ಲರಿಗೂ ಆಸೆ ಇರುತ್ತದೆ. ಅದನ್ನು ಯಾವ ರೀತಿ ನೀಡಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಹೊಸದಾಗಿ ಯಾವುದೇ ಪರವಾನಗಿ ನೀಡುತ್ತಿಲ್ಲ. ಬಾಕಿ ಉಳಿದ ಲೇಸೆನ್ಸ್ ಮಾತ್ರ ಕೊಡಲಾಗುತ್ತಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.