ಕುಮಾರಪಟ್ಟಣದಲ್ಲಿ ಮದ್ಯದಂಗಡಿ ಬೇಡವೆಂದು ಪ್ರತಿಭಟನೆ

30-RNR-01
Published on

ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹಾಗೂ ಕಾನೂನು ಬಾಹಿರವಾಗಿ ತೆರೆದಿರುವ ಮದ್ಯದಂಗಡಿ ಬಂದ್​ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆ ಹಾಗೂ ಮಹಿಳೆಯರು ಮದ್ಯದಂಗಡಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಉತ್ತರ ಕರ್ನಾಟಕ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿರುವ ಕುಮಾರಪಟ್ಟಣ ಗ್ರಾಮದ ಮಧ್ಯ ಭಾಗದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹಾಗೂ ಕಾನೂನು ಬಾಹಿರವಾಗಿ ಮದ್ಯದಂಗಡಿ ತೆರೆದು ಮದ್ಯ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಇಲಾಖೆಯ ಕಾನೂನಿನ ಪ್ರಕಾರ ಗ್ರಾಮದಲ್ಲಿ ತೆರೆದಿರುವ ಮದ್ಯದಂಗಡಿಗೆ ಈ ಭಾಗದಲ್ಲಿ ಮದ್ಯ ಮಾರಾಟ ಮಾಡುವ ಅವಕಾಶವಿಲ್ಲ.

ಈ ಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದು, ಅವರು ಮದ್ಯದ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುವ ಸಂಭವ ಹೆಚ್ಚಾಗುತ್ತದೆ. ಆದ್ದರಿಂದ ಈ ಭಾಗದಲ್ಲಿ ಮದ್ಯದಂಗಡಿ ಬೇಡ ಎಂಬುದು ಸ್ಥಳಿಯರ ಆಗ್ರಹವಾಗಿತ್ತು. ಆದರೂ ಅಬಕಾರಿ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿನಿಂದ ಮದ್ಯ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಕೂಡಲೇ ಈ ಮದ್ಯದಂಗಡಿ ಬಂದ್​ ಮಾಡಬೇಕು ಎಂದು ಆಗ್ರಹಿಸಿದರು.

ಅಬಕಾರಿ ಇಲಾಖೆಯ ಅಧಿಕಾರಿಗಳು ಕಾನೂನಿನ ಪ್ರಕಾರ ಇದ್ದರೆ ಮಾತ್ರ ಮಾರಾಟ ಮಾಡಸಲಿ. ಆದರೆ, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಕೂಡಲೇ ಮದ್ಯದಂಗಡಿ ಬಂದ್​ ಮಾಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಬಂದ ಪೊಲೀಸರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ದಲಿತ ಸಂಘಟನೆಯ ಮುಖಂಡ ಕೆ.ಆರ್​. ಉಮೇಶ, ಹನುಮಂತ ಹರಿಹರ, ಸಂಗಪ್ಪ ಬಾಕಿರ್, ಗೋವಿಂದ ಹರಿಹರ, ರೇಣುಕಾ ಲಮಾಣಿ, ಭಾಗ್ಯಮ್ಮ ತುಮ್ಮಿನಕಟ್ಟಿ, ಮಮತಾ ತುಮ್ಮಿನಕಟ್ಟಿ, ಬಸಮ್ಮ ಬನ್ನಿಹಟ್ಟಿ, ರುದ್ರಮ್ಮ ತುಮ್ಮಿನಕಟ್ಟಿ, ಗಂಗಮ್ಮ ಉಪ್ಪಾರ, ಯಲ್ಲಮ್ಮ ನೇಕಾರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net