

ಲಕ್ನೌ: ಆಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗ (ಐಸಿಯು) ಎಂದಮೇಲೆ ಸ್ಪೆಷಲಿಸ್ಟ್ ವೈದ್ಯರೂ ಅಲ್ಲೇ ಇರಬೇಕು. ಇರದಿದ್ದರೆ ಅವಾಂತರ ಉಂಟಾಗಬಹುದು. ಆದರೆ ಉತ್ತರಪ್ರದೇಶದಲ್ಲಿ ಸ್ಪೆಷಲಿಸ್ಟ್ ಎಲ್ಲೋ, ಐಸಿಯೋ ಎಲ್ಲೋ...
ಹೌದು.. ಐಸಿಯುಗಳಲ್ಲಿ ತಕ್ಷಣಕ್ಕೆ ಸ್ಪೆಷಲಿಸ್ಟ್ಗಳ ಸಲಹೆ-ಸೇವೆ ಸಿಗದೆ ರೋಗಿಗಳಿಗೆ ಸಮಸ್ಯೆ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಸದೊಂದು ವ್ಯವಸ್ಥೆಗೆ ಮುಂದಾಗಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಸಭೆ ನಡೆಸಿದ ಅವರು, ಎಲ್ಲ ಮೆಡಿಕಲ್ ಕಾಲೇಜುಗಳಿಗೆ ವಿಶೇಷ ಟೆಕ್ನಾಲಜಿ ಮೂಲಕ ವರ್ಚುವಲ್ ಐಸಿಯು ಲಿಂಕ್ ಮಾಡುವ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿದ್ದಾರೆ. ಐಸಿಯುನಲ್ಲಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಇದರಿಂದ ಸ್ಟೆಷಲಿಸ್ಟ್ಗಳ ಸಲಹೆ-ಸೇವೆ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.
ಇನ್ನು ಕಳೆದ ಒಂದು ವಾರದಿಂದ ಪ್ರತಿದಿನ ನೂರಕ್ಕೂ ಹೆಚ್ಚು ಸೋಂಕು ಪ್ರಕರಣ ಪತ್ತೆ ಆಗುತ್ತಿರುವ ಜಿಲ್ಲೆಗಳಲ್ಲಿ ಕರೊನಾ ನಿಯಂತ್ರಣಕ್ಕೆ ವಿಶೇಷ ನಿಗಾ ವಹಿಸುವಂತೆಯೂ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)