

ಬೆಂಗಳೂರು: ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದರಲ್ಲಿ ನೂರಕ್ಕೆ ನೂರು ಸತ್ಯವಿದೆ. ಯಾವುದೇ ಹುದ್ದೆಗಳ ಬೇಡಿಕೆಗೆ ಮನ್ನಣೆ ನೀಡಕೂಡದು ಎಂಬ ಸೂಚನೆಗಳು ರವಾನೆಯಾಗುತ್ತಿವೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದರು.
ಸಿಎಂ ಹಾಗೂ ಕೆಲವು ಸಚಿವರ ಕಚೇರಿಯಿಂದ ನೇರ ೆನ್ ಕರೆ ಹೋಗುತ್ತವೆ. ಲಿಂಗಾಯತ ಅಧಿಕಾರಿಗಳು ಕೇಳಿದ ಅಥವಾ ಆಯಕಟ್ಟಿನ ಹುದ್ದೆಗಳಿಗೆ ವರ್ಗಾವಣೆ ಮಾಡಬೇಡಿ ಎನ್ನುವ ಸೂಚನೆ ನೀಡಲಾಗುತ್ತಿದೆ ಎಂದು ದೂರಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲೆಂದು ಜೆಡಿಎಸ್ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವ ವರಿಷ್ಠರ ನಿರ್ಧಾರ ಸರಿಯಾಗಿದೆ. ಈ ಹೊಂದಾಣಿಕೆಗೆ ಕೆಲವರು ಅಪಸ್ವರ ಎತ್ತಿರಬಹುದು, ಕ್ರಮೇಣ ಎಲ್ಲವೂ ಸರಿಹೋಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜತೆಗೆ ಸೀಟುಗಳ ಹೊಂದಾಣಿಕೆಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳ ಗಳಿಕೆ ಗುರಿ ಮೀರಿ ಸಾಧನೆ ಮಾಡಲಿದೆ. ರಾಜ್ಯದಲ್ಲಿ ಈ ಹಿಂದೆ 2008ರಲ್ಲಿ ಜೆಡಿಎಸ್ ಜತೆಗೆ ದೋಸ್ತಿ ಮಾಡಿಕೊಂಡು ಉತ್ತಮ ಆಡಳಿತ ನೀಡಲು ಸಾಧ್ಯವಾಗಿತ್ತು ಎಂದರು.
ಹಾವೇರಿ ಲೋಕಸಭೆ ಕ್ಷೇತ್ರದ ಸದಸ್ಯ ಶಿವಕುಮಾರ್ ಉದಾಸಿ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದು, ನಾನು ಕೂಡ ಆಕಾಂಕ್ಷಿಯಾಗಿರುವೆ. ರಾಜಕೀಯವಾಗಿ ನಿರುದ್ಯೋಗಿಯಲ್ಲ. ಪಕ್ಷದ ವರಿಷ್ಠರು ಸೂಚಿಸಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧವೆಂದು ಬಿ.ಸಿ.ಪಾಟೀಲ್ ಹೇಳಿದರು.